ಸಮರವಿಜ್ಞಾನ - 
	ಯುದ್ಧ ಅಥವಾ ಸಮರ ಕುರಿತ ಸಮಸ್ತ ಕ್ರಿಯೆಗಳ ವೈಜ್ಞಾನಿಕ ಅಧ್ಯಯನ (ಮಿಲಿಟರಿ ಸೈನ್ಸ್). ಸಮರವಿಜ್ಞಾನದ ವ್ಯಾಪ್ತಿ ಮತ್ತು ವಾಸ್ತವಿಕ ಯುದ್ಧನಿರ್ವಹಣೆ ಜ್ಞಾನದ ಎಲ್ಲ ಶಾಖೆಗಳನ್ನೂ (ಉದಾ: ಮಾನವಿಕ ಮತ್ತು ನೈಸರ್ಗಿಕ ವಿಜ್ಞಾನಗಳು, ಎಂಜಿನಿಯರಿಂಗ್ ಮತ್ತು ತಂತ್ರವಿದ್ಯೆ) ಒಳಗೊಂಡಿವೆ.

	ಪೀಠಿಕೆ: ಯುದ್ಧಾಚರಣೆಯೊಂದು ಸಾಮಾಜಿಕ ವಸ್ತುಸ್ಥಿತಿ. ಸಾಮಾನ್ಯವಾಗಿ ಇದೊಂದು ಮುಚ್ಚುಮರೆಯಿಲ್ಲದ, ಘೋಷಿತ, ವ್ಯವಸ್ಥಿತ ಶಸ್ತ್ರಸಂಘರ್ಷ. ಎಲ್ಲ ಕಾದಾಟಗಳೂ ವ್ಯವಸ್ಥಾಬದ್ಧ ಸೇನಾಪಡೆಗಳಿರುವ ಕಲಹಾತುರ ಅಥವಾ ಜಗಳಗಂಟಿ ರಾಷ್ಟ್ರಗಳ ನಡುವೆಯೇ ಘಟಿಸಬೇಕೆಂ ದಿಲ್ಲ. ತಮ್ಮ ರಾಜಕೀಯ ಆಶೋತ್ತರಗಳನ್ನು ಬಲಾತ್ಕಾರದಿಂದಾದರೂ ಈಡೇರಿಸಿಕೊಳ್ಳಲು ಅಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸುವ ವ್ಯವಸ್ಥಾಬಾಹಿರ ಸೇನಾಬಲಗಳಿರುವ ಬಣಗಳೂ ಶಸ್ತ್ರ ಸಂಘರ್ಷದ ಹಾದಿ ಹಿಡಿಯಬಹುದು. ಇದರ ಉದ್ದೇಶಗಳು: ಆರ್ಥಿಕ, ಸಾಮಾಜಿಕ ಧಾರ್ಮಿಕ ಅಥವಾ ರಾಜಕೀಯ ಇಲ್ಲವೇ ಈ ಯಾವುದೇ ಸಂಯೋಜನೆ. ರಾಯಭಾರಿತ್ವ (ಡಿಪ್ಲೊಮಸಿ), ಸಂವಾದ, ಸಂಧಾನ ಇವುಗಳಿಂದ ಪರಿಹಾರವಾಗದ ವಿವಾದಗಳು ಸಂಘರ್ಷದಲ್ಲಿ ಅಂದರೆ ಶಸ್ತ್ರಸಮರದಲ್ಲಿ ಅಂತ್ಯಗೊಳ್ಳುತ್ತವೆ. ಎಂದೇ, ರಾಯಭಾರಿತ್ವ ವಿಫಲವಾದಾಗ ಪ್ರಯೋಗಿಸುವ ಅಂತಿಮ ರಾಜಕೀಯಾಸ್ತ್ರ ಯುದ್ಧ ಎನ್ನುವುದುಂಟು. ಸಮರನಿರತ ಬಣಗಳಿಗೆ ಸಂಘರ್ಷದ ಅಂತಿಮ ಫಲಿತಾಂಶ ಬಲು ಮುಖ್ಯ. ಆದ್ದರಿಂದ ಅವು ತಮ್ಮ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಬಲಗಳಿಗೆ ಅನುಗುಣವಾಗಿ ಲಭ್ಯ ಸಂಪನ್ಮೂಲಸಮಸ್ತವನ್ನೂ ಯುದ್ಧದಲ್ಲಿ ಹೂಡುತ್ತವೆ. ಆಧುನಿಕ ಯುದ್ಧಾಚರಣೆಗೆ ಬೇಕಾದ ಸಂಪನ್ಮೂಲಗಳ ಪೈಕಿ ಮಾಹಿತಿ ತಂತ್ರವಿದ್ಯೆಯೂ ಒಂದು. ಸಮರಸಿದ್ಧತೆ ಮತ್ತು ವಾಸ್ತವ ಕಾದಾಟ ನಿರ್ವಹಣೆ ಸೇನಾಪಡೆಗಳ ಹೊಣೆಯಾದರೂ ಇತರ ಎಲ್ಲ ಸಂಗತಿಗಳನ್ನು ನಿಭಾಯಿಸಲು ಪ್ರತಿಯೊಂದು ರಾಷ್ಟ್ರದಲ್ಲಿಯೂ ಪ್ರತ್ಯೇಕ ಸಚಿವಾಲಯ ಉಂಟು. 

	ಯುದ್ಧ ನಿರ್ವಹಣೆಯಲ್ಲಿ ಮೂರು ಮುಖ್ಯ ವಿಭಾಗಗಳಿವೆ: 

	1. ಪರಿಕರ್ಮಗಳು (ಆಪರೇಶನ್ಸ್): ಕಾದಾಡುವ ಪಡೆಗಳ ಮತ್ತು ಬೆಂಬಲಿಸುವ ತಂಡಗಳ ಕುಶಲ ಚಾಲನೆ ಮತ್ತು ಕಾದಾಟದಲ್ಲಿ ಇವುಗಳ ಪ್ರವರ್ತನೆ.

	2. ಸಂಪರ್ಕ ಮತ್ತು ಬೇಹುಸುದ್ದಿ (ಕಮ್ಯುನಿಕೇಶನ್ ಅ್ಯಂಡ್ ಇಂಟೆಲಿಜೆನ್ಸ್): ಸಂದೇಶ, ಆದೇಶ ಮತ್ತು ವರದಿಗಳ ವಿತರಣೆ ಹಾಗೂ ಸ್ವೀಕಾರ; ಶತ್ರುವಿನ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ಆತನಿಗೆ ಮಾಹಿತಿ ನಿರಾಕರಣೆ - ಇವನ್ನು ಸಾಧಿಸಲು ಯುಕ್ತ ಸಂಪರ್ಕ ವ್ಯವಸ್ಥೆ ಸ್ಥಾಪನೆ.                          
 
 	3. ಸೈನ್ಯ ವ್ಯವಸ್ಥಾಪನಾತಂತ್ರ (ಲಾಜಿಸ್ಟಿಕ್ಸ್): ಸುಶಿಕ್ಷಿತ ಯೋಧರ ಮತ್ತು ಆವಶ್ಯಕ ಸಾಮಗ್ರಿಗಳ ಪೂರೈಕೆ; ಯುಕ್ತ ವೈದ್ಯಕೀಯ ಹಾಗೂ ದುರಸ್ತಿ ನೆರವು ನೀಡಿಕೆ. 

	ಯುದ್ಧದ ರೀತಿ, ಪ್ರಮಾಣ ಅಥವಾ ವ್ಯಾಪ್ತಿ ಏನೇ ಇರಲಿ, ಈ ಮೂರೂ ವಿಭಾಗಗಳ ಸಮರ್ಥ ನಿರ್ವಹಣೆಗೆ ಲಭ್ಯ ವಿಜ್ಞಾನ ಮತ್ತು ತಂತ್ರವಿದ್ಯೆಗಳ ದಕ್ಷ ಬಳಕೆ ಅತ್ಯಗತ್ಯ.

	ಯುದ್ಧ ಮತ್ತು ತಂತ್ರವಿದ್ಯೆ: ಶಸ್ತ್ರ ಸಂಘರ್ಷಗಳು ಮೊದಮೊದಲು ಆಗುತ್ತಿದ್ದುದು ನೆಲದ ಮೇಲೆ ಎಂಬುದು ಐತಿಹಾಸಿಕ ತಥ್ಯ. ವಿಶ್ವಾಸಾರ್ಹವಾದ ದೋಣಿಗಳನ್ನು ನಿರ್ಮಿಸುವ ತಂತ್ರವಿದ್ಯೆ ಸಿದ್ಧಿಸಿದಾಗ ಅದು ಜಲಕ್ಕೂ ತದನಂತರ, ಅರ್ಥಾತ್, 20ನೆಯ ಶತಮಾನದ ಪೂರ್ವಾರ್ಧದಲ್ಲಿ ಹಾರುವ ಯಂತ್ರಗಳ ಉಪಜ್ಞೆಯಾದಾಗ ವಾಯುವಿಗೂ ವಿಸ್ತರಿಸಿತು. ಅದೇ ಶತಮಾನದ ಉತ್ತರಾರ್ಧದಲ್ಲಿ ವಾಯುಮಂಡಲದಾ ಚೆಗೂ ಅಂದರೆ ವ್ಯೋಮಕ್ಕೂ ವಿಸ್ತರಿಸಿತು.

	ನವೀನ ತಂತ್ರವಿದ್ಯೆಗಳ ಸೃಜನಾತ್ಮಕ ಅನ್ವಯದಿಂದ ಪ್ರಭಾವಿತವಾದ ಯುಕ್ತಿಗಳೂ ಸಮರತಂತ್ರ  ಯುಕ್ತಿಗಳೂ (ಟ್ಯಾಕ್ಟಿಕ್ಸ್) ಸಮರಕಲೆಯ ಸ್ವರೂಪದಲ್ಲಿ ಉಂಟುಮಾಡಿದ ಮಹತ್ತರ ಬದಲಾವಣೆಗಳೇ ಸಮರಾಚರಣೆಯಲ್ಲಿ ಆದ ಕ್ರ್ರಾಂತಿಗಳು. ಮೂಲತಃ ಬೇಟೆಯ ಆಯುಧ ನಿರ್ಮಿಸಲೋಸುಗ ಮೊನಚು ಕೋಲುಗಳು ಮತ್ತು ಚೂಪಾದ ಅಥವಾ ಭಾರವಾದ ಕಲ್ಲುಗಳನ್ನು ದೊಣ್ಣೆಗೆ ಕಟ್ಟಿ ಈಟಿ ಇಲ್ಲವೇ ಗದೆ ತಯಾರಿಸುವ ತಂತ್ರವಿದ್ಯೆ ವಿಕಸಿಸಿತು. ಇದೇ ಸಶಸ್ತ್ರ ಸಂಘರ್ಷದ ಆರಂಭಕ್ಕೂ ಕಾರಣವಾಯಿತು. ಮರ ಮತ್ತು ಚಕ್ಕಳದ ಸ್ಥಿತಿಸ್ಥಾಪಕ ಗುಣ ಬಳಸಿ ತೋಳಿನ ಹರವಿನಿಂದಾಚೆಗಿರುವ ಶತ್ರುವಿನೊಂದಿಗೆ ಕಾದುವ ಸಾಮಥ್ರ್ಯ ಬಿಲ್ಲು ನಿರ್ಮಿಸುವ ತಂತ್ರವಿದ್ಯೆ ಒದಗಿಸಿತು. ಆಕ್ರಮಣಕಾರೀ ಆಯುಧ ತಯಾರಿಯ ತಂತ್ರವಿದ್ಯೆಯೇ ಲೋಹ ಹಾಗೂ ಚಕ್ಕಳದ ಕವಚಗಳಂಥ ರಕ್ಷಣಾಸಾಧನಗಳ ನಿರ್ಮಾಣವನ್ನೂ ಸಾಧ್ಯವಾಗಿಸಿತು. ಪ್ರಾಣಿಗಳನ್ನು ಸೆರೆಹಿಡಿಯುವ, ಪಳಗಿಸುವ, ಸಂತತಿ ಬೆಳೆಸುವ ಮತ್ತು ತರಬೇತಿ ನೀಡುವ ಕಲೆಯ ಅಭಿವೃದ್ಧಿ ಭೂಯುದ್ಧಾಚರಣೆಗೆ ಹೊಸ ಆಯಾಮವನ್ನೇ ನೀಡಿತು. ರಣಾಂಗಣದಲ್ಲಿ ಪದಾತಿದಳದೊಂದಿಗೆ ಕ್ಷಿಪ್ರ ಚಲನ ಸಾಮಥ್ರ್ಯವುಳ್ಳ ಪ್ರಾಣಿಸವಾರದಳವೂ ಸೇರುವಂತಾಯಿತು. ತತ್ಪರಿಣಾಮವಾಗಿ ಪದಾತಿದಳದ ವಿರುದ್ಧ ಹೋರಾಡುವವರಿಗೆ ಅಧಿಕ ರಕ್ಷಣೆಯೂ ದೊರೆಯಿತು. 10ನೆಯ ಶತಮಾನದಲ್ಲಿ ಬಾಣಬಿರುಸಿನ ತಯಾರಿಕೆಗೆ ಮತ್ತು ಸಂಜ್ಞಾಪ್ರೇಷಣೆಗೆ ಚೀನದಲ್ಲಿ ಬಳಕೆಯಲ್ಲಿತ್ತು ಎನ್ನಲಾದ ತುಪಾಕಿಮದ್ದು ತಂತ್ರವಿದ್ಯೆ 14ನೆಯ ಶತಮಾನದಲ್ಲಿ ಯುರೋಪಿನಲ್ಲಿ ಯುದ್ಧಾಚರಣೆಗೆ ಬಳಕೆಯಾಯಿತು. ಇದರಿಂದ ಆ ತನಕ ಬಿಲ್ಲುಬಾಣ, ಈಟಿ, ಕೊಡಲಿ ಮತ್ತು ಗದೆಯಂಥ ಆಯುಧಗಳಿಗೆ ಮಾತ್ರ ಸೀಮಿತವಾಗಿದ್ದ ಯುದ್ಧಾಚರಣೆಯ ಸ್ವರೂಪವೇ ಬದಲಾಯಿತು. ಸಮರಪರಿಕರ್ಮಗಳಿಗೆ ಸಂಬಂಧಿಸಿದಂತೆ ಈ ಎಲ್ಲ ಬದಲಾವಣೆಗಳು ಸಂಭವಿಸುತ್ತಿದ್ದಾಗಲೇ ಯುದ್ಧಾಚರಣೆಯ ಉಳಿದೆರಡು ವಿಭಾಗಗಳಲ್ಲಿಯೂ ಮಹತ್ತ್ವಪೂರ್ಣ ವ್ಯತ್ಯಯಗಳು ಕಂಡುಬರುತ್ತಿದ್ದುವು. ಉದಾ: ಸಂಪರ್ಕ ಮತ್ತು ಬೇಹು ಸುದ್ದಿ ವಿಭಾಗದಲ್ಲಿ ಧೂಮಸಂಜ್ಞೆ ಮತ್ತು ಸಂಬಂಧಿತ ಸಂಕೇತ ತಂತ್ರವಿದ್ಯೆಯ ವಿಕಾಸ; ಸಂದೇಶ, ಆಜ್ಞೆ ಅಥವಾ ವರದಿ ರವಾನಿಸಲು ಲೋಹಗಳ ಹೊಳೆವ ಮೇಲ್ಮೈಗಳಿಂದ ಸೌರಪ್ರಕಾಶವನ್ನು ಪ್ರತಿಫಲಿಸಿ ಪಡೆವ ಕ್ಷಣಿಕ ಉಜ್ಜ್ವಲಬೆಳಕು; ರಂಗಿನ ಪತಾಕೆ ಅಥವಾ ತರಬೇತಿ ಪಡೆದ ಪಾರಿವಾಳ ಮುಂತಾದವುಗಳ ಬಳಕೆ ಸಂಪರ್ಕ. ಅಂತೆಯೇ, ಸೈನ್ಯ ವ್ಯವಸ್ಥಾಪನಾತಂತ್ರದಲ್ಲಿ ಮಾನವ ಅಥವಾ ಪ್ರಾಣಿ ಎಳೆಯುವ ಗಾಡಿಗಳ ನಿರ್ಮಾಣ ಸಾಧ್ಯವಾಗಿಸಿದ ಚಕ್ರದ ಉಪಜ್ಞೆ. 

	ಮಾನವೇತಿಹಾಸದ ಆ ಘಟ್ಟದಲ್ಲಿ ತಂತ್ರವಿದ್ಯೆ ವಿಕಸಿಸಿದ್ದು ಬಹುತೇಕ ವೈಯಕ್ತಿಕ ನೆಲೆಯಲ್ಲಿ ಆದ ಆವಿಷ್ಕಾರಗಳ ಫಲವಾಗಿಯೇ ವಿನಾ ಸಮಾಜನಿಯಂತ್ರಿತ ಪ್ರಕ್ರಿಯೆಯ ಫಲವಾಗಿ ಅಲ್ಲ. ಜ್ಞಾನ ಪ್ರಸರಣಕ್ಕೂ ಆ ಕಾಲದ ಲಭ್ಯ ತಂತ್ರವಿದ್ಯೆ ಮಿತಿ ವಿಧಿಸಿತ್ತು. ಯಂತ್ರಾಧಾರಿತ ಉದ್ಯಮ ಪ್ರಾಬಲ್ಯವಿರುವ ಆರ್ಥಿಕತೆಯಾಗಿ ಕರಕೌಶಲಾಧಾರಿತ ಆರ್ಥಿಕತೆ ಪರಿವರ್ತನೆಗೊಳ್ಳಲು ಯುರೋಪಿನ ಔದ್ಯಮಿಕ ಕ್ರಾಂತಿಯೇ ಕಾರಣ. ಗಣಿತ, ಭೌತ ಮತ್ತು ಜೀವವಿಜ್ಞಾನಗಳ ವಿಕಸನಕ್ಕೆ ಅನುಗುಣವಾಗಿ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ಮತ್ತು ತಾಂತ್ರಿಕ ವ್ಯತ್ಯಯಗಳಾಗಲು ಇದು ಪ್ರೇರಕವಾಯಿತು. ಲಭ್ಯ ತಂತ್ರವಿದ್ಯೆಯಿಂದ ಅಧಿಕಾಧಿಕ ದೂರದಲ್ಲಿ, ಅತಿ ವೇಗದಲ್ಲಿ ಅಧಿಕಾಧಿಕ ಹಾನಿ ಉಂಟುಮಾಡಬಲ್ಲ ಆಯುಧಗಳನ್ನು ರೂಪಿಸಲಾಯಿತು. ಕೊಳವಿಮೂಲಕ ಬಾರು ಮಾಡುವ (ಮಜûಲ್ ಲೋಡಿಂಗ್) ಪಿಸ್ತೂಲನ್ನು ಸುತ್ತುಪಿಸ್ತೂಲೂ (ರಿವಾಲ್ವರ್) ಬಂದೂಕನ್ನು (ಮಸ್ಕೆಟ್) ಅಗುಳಿ ಕ್ರಿಯೆ ಮುಖೇನ ಹಿಂಭಾಗದಿಂದ ಬಾರುಮಾಡುವ ಸುರುಳಿಕೋವಿಯೂ (ಬೋಲ್ಟ್ ಆ್ಯಕ್ಷನ್ ಬ್ರೀಚ್ ಲೋಡೆಡ್ ರೈ¥sóÀಲ್) ಪ್ರತಿಸ್ಥಾಪಿಸಿದುವು. ಅನಂತರ ಯಂತ್ರಕೋವಿಯ (ಮೆಶಿನ್‍ಗನ್) ಉಪಜ್ಞೆಯಾಯಿತು. ಉತ್ತಮ ವ್ಯಾಪ್ತಿ, ನಿಖರತೆ ಮತ್ತು ಗುಂಡುಹಾರಿಸುವ ಸಾಮಥ್ರ್ಯವಿದ್ದ ಇವುಗಳ ಸಾತಗಣೆಯೂ ಸುಲಭವಾಗಿತ್ತು. ನೂತನ ಮತ್ತು ಸುಧಾರಿತ ಆಯುಧಗಳು ಲಭ್ಯವಾದಂತೆಲ್ಲ ಅವುಗಳ ಪ್ರಯೋಗಕ್ಕಾಗಿ ಸಮರತಂತ್ರಗಳೂ ರಣಾಂಗಣ ಯುಕ್ತಿಗಳೂ ಬದಲಾದುವು. ರಾವುತದಳದ ಬದಲು ಯುದ್ಧಟ್ಯಾಂಕ್‍ಗಳು ಬಳಕೆಗೆ ಬಂದುವು. ಮರದ ಹಾಯಿ ದೋಣಿಗಳನ್ನು ಉಗಿಯಂತ್ರಚಾಲಿತ ಉಕ್ಕಿನ ಹಡಗುಗಳು ಪ್ರತಿಸ್ಥಾಪಿಸಿದುವು. ಜಲಾಂತರ್ಗಾಮಿಗಳ ಉಪಜ್ಞೆಯಾದಾಗ ಸಾಗರಸಮರಗಳ ಸ್ವರೂಪವೇ ಬದಲಾಯಿತು. ಅಮೆರಿಕದಲ್ಲಿ ರೈಟ್ ಸಹೋದರರು (ಆರ್ವಿಲ್ ರೈಟ್ 1871-1948 ಮತ್ತು ವಿಲ್ಟರ್ ರೈಟ್ 1867-1912) ಉಪಜ್ಞಿಸಿದ ವಾಯುವಿಗಿಂತ ಭಾರದ ಹಾರುವಯಂತ್ರಗಳು (1903) ಯುರೋಪಿನ ರಣಾಂಗಣಗಳಲ್ಲಿ ಸ್ಥಳಶೋಧನೆಯನ್ನೂ (ರಿಕಾನೆಸನ್ಸ್) ಹಾಗೂ ಭೂಲಕ್ಷ್ಯಗಳ ಮೇಲೆ ಆಕ್ರಮಣವನ್ನೂ ಮಾಡಬಲ್ಲ ಯುದ್ಧವಿಮಾನಗಳ ರೂಪದಲ್ಲಿ ಕಾಣಿಸಿಕೊಂಡುವು. ಉಗಿಯಂತ್ರ ಮತ್ತು ಅಂತರ್ದಹನ ಯಂತ್ರದ ಉಪಜ್ಞೆಯಾದ ಬಳಿಕ ಪರಿಕರ್ಮ (ಆಪರೇಶನ್) ಮತ್ತು ಸೈನ್ಯ ವ್ಯವಸ್ಥಾಪನಾವಿಭಾಗಗಳಲ್ಲಿ ಯಾಂತ್ರಿಕ ನೋದನೆಯ (ಮೆಕ್ಯಾನಿಕಲ್ ಪ್ರೊಪಲ್‍ಶನ್) ಬಳಕೆ ಆರಂಭವಾಯಿತು. ದೂರಲೇಖ ಮತ್ತು ನಿಸ್ತಂತು ರೇಡಿಯೊಗಳ ಉಪಜ್ಞೆಗಳನ್ನು ಸಂಪರ್ಕ ಮತ್ತು ಬೇಹುಸುದ್ದಿ ವಿಭಾಗಗಳು ಬಲುಬೇಗನೆ ತಮ್ಮ ಉದ್ದೇಶಸಾಧನೆಗಾಗಿ ಬಳಸಲಾರಂಭಿಸಿ ದುವು. ಸಶಸ್ತ್ರಸಂಘರ್ಷಗಳಲ್ಲಿ ಬಳಸಬಹುದಾದ ಉಪಜ್ಞೆಗಳೂ ಆವಿಷ್ಕಾರಗಳೂ ತಂತ್ರವಿದ್ಯೆಯಿಂದ ಹೊರಹೊಮ್ಮ ತೊಡಗಿದುವು.

	19-20ನೆಯ ಶತಮಾನದ ಆದಿಭಾಗದಲ್ಲಿ ದ್ರವ್ಯಸಂಪತ್ತಿನ ಉತ್ಪಾದನೆ ಎಲ್ಲ ಉದ್ಯಮಗಳ ಪ್ರಾಥಮಿಕ ಗುರಿಯಾಗಿತ್ತು. ಯುದ್ಧಕಾಲದಲ್ಲಿ ಮಾತ್ರ ಅವು ಗುಳ ಬಡಿದು ಖಡ್ಗವಾಗಿಸುವ ಕಾಯಕಕ್ಕೆ ತಮ್ಮನ್ನು, ಅರ್ಥಾತ್ ಶಾಂತಿಕಾಲದ ಉತ್ಪಾದನ ಸಾಮಥ್ರ್ಯವನ್ನು ಸಮರಾನುಕೂಲೀ ಉತ್ಪಾದನ ಸಾಮಥ್ರ್ಯವಾಗಿ ಪರಿವರ್ತಿಸಿಕೊಳ್ಳುತ್ತಿದ್ದುವು. ಅದೇನೇ ಇದ್ದರೂ ಎರಡನೆಯ ಮಹಾಯುದ್ಧ (1939-45) ಅಂತ್ಯಗೊಂಡಂದಿನಿಂದ ಯುದ್ಧಸಾಧನಗಳ ಉತ್ಪಾದನೆಗೆ ಮೀಸಲಾದ ಉದ್ಯಮಗಳ ಪ್ರಮಾಣ ಗಮನಾರ್ಹವಾಗಿ ಏರತೊಡಗಿತು. ಇಂಥ ಉದ್ಯಮನಿರತ ಸಂಸ್ಥಾವಲಯವೇ ಸಮರೋದ್ಯಮ ಸಂಕೀರ್ಣ (ಮಿಲಿಟರಿ-ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್). ಸಮರ ಅಥವಾ ಶಾಂತಿ ಕಾಲಗಳೆರಡರಲ್ಲೂ ಬಳಸಬಹುದಾದ ದ್ವಿಉಪ ಯೋಗೀ ತಂತ್ರವಿದ್ಯೆಯ ವಿಕಾಸ ಅಥವಾ ನೂತನ ಇಲ್ಲವೇ ಸುಧಾರಿತ ಯುದ್ಧಸಾಧನಗಳ ಉತ್ಪಾದನೆಯ ಉದ್ದೇಶವಿದ್ದ ವೈಜ್ಞಾನಿಕ ಹಾಗೂ ತಂತ್ರವಿದ್ಯಾಸಂಶೋಧನೆಗಳನ್ನು ಈ ಸಂಸ್ಥಾವಲಯ ಕೈಗೊಂಡಿತು. ಇಂಥ ಬಹುತೇಕ ಸಂಶೋಧನೆಗಳ ಜವಾಬ್ದಾರಿಯನ್ನು ಪ್ರಾಯೋಜಿತ ಯೋಜನೆಗಳ ರೂಪದಲ್ಲಿ ವಿಶ್ವವಿದ್ಯಾಲಯಗಳಿಗೆ ಈ ವಲಯ ನೀಡತೊಡಗಿತು. ಇಂದಿನ ನೇರ ಅಥವಾ ಪರೋಕ್ಷ ಸಮರೋಪಯುಕ್ತ ಸಂಶೋಧನೆಗಳ ಜ್ಞಾನ ಬುನಾದಿಯಲ್ಲಿ ಭೌತ, ಜೀವ, ಭೂ, ಸಮಾಜ ಮುಂತಾದ ಅನೇಕ ವಿಜ್ಞಾನಗಳು ಮೇಳೈಸಿವೆ.

	ಸಮರವಿಜ್ಞಾನ ಮತ್ತು ತಂತ್ರವಿದ್ಯೆ: ಆದಿ ಮತ್ತು ಮಧ್ಯಕಾಲಗಳಲ್ಲಿ ಲಭ್ಯ ತಂತ್ರವಿದ್ಯೆಯನ್ನೇ ಸೃಜನಾತ್ಮಕವಾಗಿ ಸಮರೋದ್ದೇಶಗಳಿಗಾಗಿ ಬಳಸುತ್ತಿದ್ದರು. ಔದ್ಯಮಿಕ ಕ್ರಾಂತಿಗೆ (18ನೆಯ ಶತಮಾನ) ಕಾರಣವಾದ ವಿಜ್ಞಾನ ಮತ್ತು ತಂತ್ರವಿದ್ಯೆ ಇನ್ನೂ ಹೆಚ್ಚು ಇಂಥ ಅವಕಾಶಗಳನ್ನು ಒದಗಿಸಿತು. 20ನೆಯ ಶತಮಾನದ ಮಧ್ಯಭಾಗದನಂತರ ಜಗತ್ತು ಹೆಚ್ಚುಹೆಚ್ಚು ಯುದ್ಧಮನಸ್ಕವಾಗತೊಡಗಿತು. ತತ್ಪರಿಣಾಮವಾಗಿ, ಸುಧಾರಿತ, ನವೀನ ಮತ್ತು ಅಧಿಕಾಧಿಕ ಹಾನಿಯುಂಟುಮಾಡುವ ಆಯುಧ ಮತ್ತು ಯುದ್ಧಸಾಧನ ವ್ಯವಸ್ಥೆಗಳ ಉಪಜ್ಞೆ, ವಿಕಾಸ ಮತ್ತು ಔದ್ಯಮಿಕ ಉತ್ಪಾದನೆ ಸಂಬಂಧಿತ ಸಮರತಂತ್ರವಿದ್ಯೆ ವಿಶೇಷ ಪ್ರಾವೀಣ್ಯ ಬೇಡುವ ಕ್ಷೇತ್ರವಾಯಿತು. ಸಶಸ್ತ್ರ ಸಂಘರ್ಷದ ಪರಿಕರ್ಮ, ಸಂಪರ್ಕ ಮತ್ತು ಬೇಹುಸುದ್ದಿ ಹಾಗೂ ಸೈನ್ಯ ವ್ಯವಸ್ಥಾಪನಾವಿಭಾಗಗಳಲ್ಲಿ  ಆಧುನಿಕ ವಿಜ್ಞಾನ ಮತ್ತು ತಂತ್ರವಿದ್ಯೆ ಪ್ರಮುಖ ಬದಲಾವಣೆಗಳನ್ನು ಉಂಟುಮಾಡಿವೆ. ಅಷ್ಟೇ ಅಲ್ಲ, ಯುದ್ಧದ ವಿಧ, ವ್ಯಾಪ್ತಿ ಮತ್ತು ಪ್ರಮಾಣಗಳನ್ನು ಹೆಚ್ಚಿಸಿವೆ. ತಾರಾ ಸಮರ, ಎಲೆಕ್ಟ್ರಾನಿಕ್ ಯುದ್ಧಾಚರಣೆ ಹಾಗೂ ತಂತ್ರವಿದ್ಯಾಚಾಲಿತ ಮಾಹಿತಿ ಯುದ್ಧಾಚರಣೆ ಪರಿಕಲ್ಪನೆಗಳನ್ನೂ ಸೃಷ್ಟಿಸಿವೆ. 

	20ನೆಯ ಶತಮಾನದಲ್ಲಿ ರಾಕೆಟ್‍ವಿಜ್ಞಾನದಲ್ಲಾದ ಪ್ರಗತಿ ಕ್ಷಿಪಣಿ ಮತ್ತು ಉಪಗ್ರಹಗಳ ಸೃಷ್ಟಿಗೆ ಕಾರಣವಾಯಿತು. ಕ್ಷಿಪಣಿಗಳು ಮತ್ತು ಬಂದೂಕಿನ ಸಿಡಿಗುಂಡುಗಳು (ಶೆಲ್ಸ್) ಅನೇಕ ನಮೂನೆಯ ಸಿಡಿತಲೆಗಳ (ಉದಾ: ಸ್ಫೋಟಕ, ಲೋಹಕವಚ ಭೇದಕ, ಕಾಂಕ್ರಿಟ್ ಭೇದಕ, ಬೈಜಿಕ, ಜೈವಿಕ ಅಥವಾ ರಾಸಾಯನಿಕ) ಪೈಕಿ  ಯಾವುದನ್ನೇ ಆದರೂ ಒಯ್ಯಬಲ್ಲವು. ಅಷ್ಟೇ ಅಲ್ಲ, ಉಪಗ್ರಹ ಸಂಪರ್ಕ ಮೂಲಕ ಅವನ್ನು ಜಗತ್ತಿನ ಯಾವುದೇ ಸ್ಥಳಕ್ಕೆ ನಿಖರವಾಗಿ ನಿರ್ದೇಶಿಸಲೂ ಸಾಧ್ಯ. ರೇಡಿಯೊ ತಂತ್ರವಿದ್ಯೆಯಿಂದಾಗಿ ಸೀಮಿತ ವ್ಯಾಪ್ತಿಯ ಮೊದಲಿನ ರೇಡಾರ್‍ಗಳೂ ಸುಧಾರಿಸಿವೆ. ತತ್ಪರಿಣಾಮವಾಗಿ, ಸೈನ್ಯಗಳಿಗೆ ದಿಗಂತದಾಚೆ ನೋಡಬಲ್ಲ ರೇಡಾರ್‍ಗಳು ಲಭ್ಯವಾಗಿವೆ. ಬಹುಸಂಖ್ಯೆಯ ಭೂಸ್ಥಾಯೀ-ಉಪಗ್ರಹಸ್ಥಾಪಿತ ಜಾಗತಿಕ ಸ್ಥಾನನಿರ್ದೇಶಕ ವ್ಯವಸ್ಥೆಯ (ಗ್ಲೋಬಲ್ ಪೊಸಿಶನಿಂಗ್ ಸಿಸ್ಟಮ್, ಜಿಪಿಎಸ್) ನೆರವಿನಿಂದ ಸಹಸ್ರಾರು ಕಿಲೊಮೀಟರ್ ದೂರದಲ್ಲಿರುವ ಲಕ್ಷ್ಯದ ಸ್ಥಾನವನ್ನು ನಿಖರವಾಗಿ (ಗರಿಷ್ಠ ದೋಷಪ್ರಮಾಣ 5 ಮೀ) ಗುರುತಿಸಬಹುದು. ಕಡಿಮೆ ವಿದ್ಯುಚ್ಛಕ್ತಿ ಬಳಸುವ ಕಿರುಗಾತ್ರದ ಬಲು ದೊಡ್ಡ ಪ್ರಮಾಣದ ಅನುಕಲನ (ವೆರಿ ಲಾರ್ಜ್ ಸ್ಕೇಲ್ ಇಂಟೆಗ್ರೇಶನ್) ತಂತ್ರವಿದ್ಯೆ-ಆಧಾರಿತ ವಿಶೇಷೋದ್ದೇಶ ಗಣಕಗಳು ಆಯುಧಗಳನ್ನು ಗುರಿಯತ್ತ ನಿರ್ದೇಶಿಸುವಂಥ ಸಮರನಿರ್ದಿಷ್ಟ ಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ನಿಖರವಾಗಿ ಪುನಃಪುನಃ ಮಾಡಬಲ್ಲವು. ಸೇನಾಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಸಮರೋದ್ದೇಶಗಳಿಗಾಗಿ ಬಳಕೆಯಾಗುತ್ತಿ ರುವ 21ನೆಯ ಶತಮಾನದ ವಿಜ್ಞಾನ ಮತ್ತು ತಂತ್ರವಿದ್ಯೆಯ ಉದಾಹರಣೆಗಳು ಇಂತಿವೆ: ಉಪಗ್ರಹ ನಿರ್ದೇಶನಕ್ಕೆ ಅನುಗುಣವಾಗಿ ಬೈಜಿಕನೋದಿತ (ನ್ಯೂಕ್ಲಿಯರ್ ಪ್ರೊಪೆಲ್ಡ್) ಜಲಾಂತರ್ಗಾಮಿಗಳಿಂದ ಹಾರಿಸುವ, ಬೈಜಿಕ ಮೆಗಾಟನ್ ಸಿಡಿತಲೆ ಒಯ್ಯಬಲ್ಲ ಖಂಡಾಂತರ ಉತ್‍ಕ್ಷೇಪಿತ ಕ್ಷಿಪಣಿ (ಇಂಟರ್‍ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್) ಸಂಬಂಧಿತ ವೈಮಾಂತರಿಕ್ಷ ತಂತ್ರವಿದ್ಯೆ; ನ್ಯೂಟ್ರಾನ್ ಬಾಂಬುಗಳು; ಲಕ್ಷ್ಯಗಳನ್ನು ಹುಡುಕಬಲ್ಲ ಚುರುಕು ಅಥವಾ ಸುಟಿ (ಸ್ಮಾರ್ಟ್) ಮದ್ದುಗುಂಡುಗಳು; ಲೇಸರ್‍ನಿರ್ದೇಶಿತ ಕಿರುವ್ಯಾಪ್ತಿ ಕ್ಷಿಪಣಿಗಳು; ವಿಮಾನದಿಂದ ಹಾರಿಸುವ ಉಷ್ಣಾನ್ವೇಷಕ ಕ್ಷಿಪಣಿಗಳು, ಕದ್ದು ನುಸುಳುವ ಬಾಂಬರ್‍ಗಳು; ವಿದ್ಯುತ್ಕಾಂತರೋಹಿತದ ವಿಭಿನ್ನ ಭಾಗಗಳನ್ನು ಅವಿಚ್ಛಿನ್ನವಾಗಿ ಅಥವಾ ಸ್ಪಂದದೂಲ ರೂಪದಲ್ಲಿ ಉಪಯೋಗಿಸಿ ವ್ಯಕ್ತಿ ಅಥವಾ ಯಂತ್ರವನ್ನು ಅಶಕ್ತವಾಗಿಸುವ ಉಚ್ಚಶಕ್ತಿ-ನಿರ್ದೇಶಿತ ಆಯುಧಗಳು; ಸಿಬ್ಬಂದಿರಹಿತ ವಾಯವಿಕ ವಾಹನಗಳು (ಅನ್‍ಮ್ಯಾನ್‍ಡ್ ಏರಿಯಲ್ ವೆಹಿಕಲ್ಸ್, ಯುಎವಿ); ಭೂಮಿಯ ಮೇಲಾಗಲೀ ಸಾಗರದಲ್ಲಾಗಲೀ ಕಣ್ಗಾವಲಿನ ಅಥವಾ ಸ್ಥಳಶೋಧಕ ಸಾಧನಗಳನ್ನು ಹಾಗೂ ಆಯುಧಗಳನ್ನು ಒಯ್ಯಬಲ್ಲ ದೂರಚಾಲಿತ ವಾಹನಗಳು 

	(ರಿಮೋಟ್‍ಲಿ ಪೈಲಟೆಡ್ ವೆಹಿಕಲ್ಸ್, ಆರ್‍ಪಿವಿ); ಪದಾತಿ ದಳಕ್ಕೆ ಸುಲಭ ಸಾಗಣೆಯ ಜಿಪಿಎಸ್ ವ್ಯವಸ್ಥೆಗಳು ಮತ್ತು ಅವಕೆಂಪು (ಇನ್ಫ್ರಾರೆಡ್) ಇರುಳುದೃಷ್ಟಿ ಸಾಧನಗಳು; ಬೇಹುಗಾರಿಕೆಗೆ, ಸಂಕೇತಿಸಲು ಮತ್ತು ವಿಸಂಕೇತಿಸಲು ಗಣಕಗಳು ಹಾಗೂ ನ್ಯಾನೊತಂತ್ರವಿದ್ಯೆ; ಸೂಕ್ಷ್ಮಆರ್‍ಪಿವಿಗಳಿಗೆ ಸೂಕ್ಷ್ಮಹಾಗೂ ನ್ಯಾನೊವಿದ್ಯುತ್‍ಯಾಂತ್ರಿಕ ಸಾಧನಗಳು; ಟೆರಫ್ಲಾಪ್ (ಟೆರ: 1012, ಫ್ಲಾಪ್: ಫ್ಲೋಟಿಂಗ್‍ಪಾೈಂಟ್ ಆಪರೇಶನ್ಸ್ ಪರ್ ಸೆಕೆಂಡ್) ವೇಗದಲ್ಲಿ ಕಾರ್ಯನಿರ್ವಹಿಸುವ ಅಧಿಗಣಕಗಳು; ನ್ಯೂರಾನ್ ಗಣಕಗಳು; ಕೃತಕ ಧೀಶಕ್ತಿ (ಆರ್ಟಿಫಿಶಿಯಲ್ ಇಂಟೆಲಿಜನ್ಸ್) ಮತ್ತು ಮುಂಬರಿದ ರೋಬಟ್ ತಂತ್ರವಿದ್ಯೆ. 

	ಸಮರಕ್ರಿಯೆಗಳ ಯಶಸ್ಸು ತಂತ್ರವಿದ್ಯೆಯ ಅಭಿವರ್ಧನೆಯನ್ನು ಎಷ್ಟು ಅವಲಂಬಿಸಿದೆಯೋ ಸೈನಿಕರ ಅಭಿಪ್ರೇರಣೆ, ತರಬೇತಿ ಮತ್ತು ಹೋರಾಟಸಾಮಥ್ರ್ಯ ಹಾಗೂ ಸಮರ್ಥ ನಾಯಕತ್ವವನ್ನು ಅಷ್ಟೇ ಅವಲಂಬಿಸಿದೆ ಎಂಬುದು ಐತಿಹಾಸಿಕ ಸಿದ್ಧ ಸತ್ಯ.

	ಸಮರತಂತ್ರ ಮತ್ತು ಯುಕ್ತಿಗಳು ಹಾಗೂ ಸಮರ ತತ್ತ್ವಗಳು: ಆಧುನಿಕ ಯುದ್ಧಾಚರಣೆಯ ಸ್ವರೂಪವನ್ನು ಸಮರತಂತ್ರ ಮತ್ತು ಸಮರ ಪರಿಕರ್ಮಗಳಿಗೆ ರಾಷ್ಟ್ರದ ಸೇನಾಪಡೆಗಳ ಸಂಚಾಲನೆಗಳು ಹೀಗೆಯೇ ಇರಬೇಕೆಂದು ಆದೇಶಿಸುವ ರಾಷ್ಟ್ರೀಯ ಗುರಿಗಳು ಮತ್ತು ನೀತಿ ನಿರ್ಧರಿಸುತ್ತವೆ. ತಮ್ಮ ಮತ್ತು ಶತ್ರು ಸೇನಾಪಡೆಗಳ ತರಬೇತಿ ಹಾಗೂ ಸಾಧನಗಳ ಸ್ಥಿತಿ, ಸೈನ್ಯ ವ್ಯವಸ್ಥಾಪನಾಸಾಮಥ್ರ್ಯ ಇವನ್ನು ಕುರಿತು ಸಂಪರ್ಕ ಮತ್ತು ಬೇಹುಸುದ್ದಿ ವಿಭಾಗ ಒದಗಿಸುವ ಮಾಹಿತಿ; ಕಾಲ-ಸ್ಥಳ ಸಂಬಂಧಿತ ಅಂಶಗಳು; ಪರಿಕರ್ಮದ ಅವಧಿ; ಸಾವುನೋವುಗಳು ಮತ್ತು ಸಾಧನ ನಷ್ಟಗಳಾಗುವ ಸಾಧ್ಯತೆಗಳು; ಹೆಚ್ಚುವರಿ ಸಾಧನಗಳು ಮತ್ತು ತರಬೇತಿ ಪಡೆದ ಸಿಬ್ಬಂದಿಯನ್ನು ಒದಗಿಸಿ ಅಥವಾ ಮರುಭರಿಕೆ ಮಾಡಿ ಯುದ್ಧನಿರತ ಸೇನಾಪಡೆಗಳನ್ನು ಬಲಗೊಳಿಸಲು ಇರುವ ಸಾಮಥ್ರ್ಯ ಮುಂತಾದವುಗಳ ಜೊತೆಗೆ ರಾಷ್ಟ್ರದೊಳಗೆ ಮತ್ತು ಹೊರಗೆ ಉದ್ಭವಿಸಬಹುದಾದ ರಾಜಕೀಯ ಮಾರ್ದನಿಗಳು, ಆಂತರಿಕ ಭದ್ರತೆ ಮತ್ತು ಆರ್ಥಿಕ ಸಮಸ್ಯೆಗಳು, ಮಿತ್ರರಾಷ್ಟ್ರ ಸಂಬಂಧಗಳ ಮೇಲಾಗುವ ಪರಿಣಾಮಗಳು ಮುಂತಾದ ವಾದಾಂಶಗಳು ಕೂಡ ಸೇರಿದಂತೆ ಎಲ್ಲ ಅಂಶಗಳನ್ನೂ ಗಮನದಲ್ಲಿಟ್ಟುಕೊಂಡು ಅತ್ಯುಚ್ಚ ಮಟ್ಟದ ಸೇನಾಧಿಕಾರಿ ಗಳು ಪರಿಕರ್ಮಗಳನ್ನು ಯೋಜಿಸುತ್ತಾರೆ. 

	ಸಮರತಂತ್ರದ ಗುರಿಗಳಿಗೆ ತಕ್ಕುದಾದ ಯುದ್ಧೋದ್ದೇಶಗಳನ್ನು ಸಾಧಿಸುವ ಸಲುವಾಗಿ ಸೇನಾ ಸಾಮಥ್ರ್ಯವನ್ನು ಉಪಯೋಗಿಸುವ ರಣಾಂಗಣ ಮಟ್ಟದ ಯುದ್ಧಯುಕ್ತಿಗಳನ್ನು ರೂಪಿಸಲಾಗುತ್ತದೆ. ಇವು ಭೂ, ನೌಕಾ ಮತ್ತು ವಾಯು ಪಡೆಗಳಿಗೆ ವಿಭಿನ್ನವಾಗಿರುತ್ತವೆಂಬುದು ಸ್ಪಷ್ಟ. ಎಂದೇ, ಈ ಪಡೆಗಳ ಪರಿಕರ್ಮಗಳು ಸಂಪೂರ್ಣವಾಗಿ ವಿಭಿನ್ನವಾಗಿರುತ್ತವೆ. ಸಂಯುಕ್ತಪರಿಕರ್ಮಗಳ ಮುಖೇನ ಮೂರೂ ಪಡೆಗಳ ಒಟ್ಟಾರೆ ಸಾಮಥ್ರ್ಯದ ಪೂರ್ಣ ಲಾಭ ಪಡೆಯಲಾಗುತ್ತದೆ. ಆಧುನಿಕ ಯುದ್ಧಾಚರಣೆಯೊಂದು ಅತಿ ಸಂಕೀರ್ಣ ಸಾಮಾಜಿಕ ವಿದ್ಯಮಾನ. ಸಮರ ಫಲಿತಾಂಶವನ್ನು ಪ್ರಭಾವಿಸುವ ಕೌಶಲಗಳು ಮತ್ತು ಸಾಮಥ್ರ್ಯಗಳು ಸಂಕೀರ್ಣವೂ ವಿಶಿಷ್ಟವಾದವೂ ಆಗಿರುವುವಲ್ಲದೆ ಅವುಗಳ ಸಂಖ್ಯೆಯೂ ಬಲುದೊಡ್ಡದಿರುವುದು ಇದರ ಕಾರಣ. ಎಂದೇ, ಸಮರದ ಸಂಕೀರ್ಣತೆ, ಅನಿಶ್ಚಿತತೆ ಮತ್ತು ಅಂದಾಜು ಮಾಡಲಾಗದಿರು ವಂಥವನ್ನು ಸೇನಾ ಕಮಾಂಡರ್‍ಗಳು ನಿಭಾಯಿಸಲು ಮಾರ್ಗದರ್ಶಿಯಾಗ ಬಹುದಾದ ಮೂಲ ಪರಿಕಲ್ಪನೆಗಳ ಯಾದಿಯೊಂದನ್ನು ಯುದ್ಧದ ತತ್ತ್ವಗಳು ಎಂಬ ಹೆಸರಿನಲ್ಲಿ ಸಮರ ಸಿದ್ಧಾಂತಿಗಳು ತಯಾರಿಸಿದ್ದಾರೆ. ಅತ್ಯಂತ ಮೂಲ ಯುದ್ಧತತ್ತ್ವಗಳು ಯಾವುವು ಎಂಬುದರ ಬಗ್ಗೆ ತಂತ್ರವಿದರಲ್ಲಿ ಒಮ್ಮತ ಇಲ್ಲವಾದರೂ ಸಾರ್ವತ್ರಿಕ ಮನ್ನಣೆ ಗಳಿಸಿರುವ ಕೆಲವು ಇಂತಿವೆ: ಗುರಿಯ ನಿಷ್ಕøಷ್ಟ ವ್ಯಾಖ್ಯೆ ಮತ್ತು ಅದನ್ನು ಪದೇಪದೇ ಬದಲಿಸದಿರುವಿಕೆ; ಅನಿರೀಕ್ಷಿತತೆ; ಸರಳತೆ; ಸುರಕ್ಷಿತತೆ; ಬಲದ ಒಗ್ಗೂಡಿಕೆ; ಏಕಾಧಿಕಾರ; ಸುಲಭಸಾಗಣೆ; ಸೈನ್ಯತಂತ್ರ; ಧೃತಿಯನ್ನು ಸದಾ ಕಾಯ್ದುಕೊಳ್ಳುವಿಕೆ; ಬೇಹುಸುದ್ದಿ; ಸೈನ್ಯ ವ್ಯವಸ್ಥಾಪನಾ ಹಾಗೂ ಆಕ್ರಮಣ ತಂತ್ರ. ಯಾವುದೇ ಸುಯೋಜಿತ ಸಮರ ಪರಿಕರ್ಮದ ಯಶಸ್ಸು ಅದರ ಸಮರತಂತ್ರ ಯುದ್ಧತತ್ತ್ವಾಧಾರಿತವಾಗಿರುವಿಕೆಯನ್ನಷ್ಟೇ ಅವಲಂಬಿಸಿರುವುದಿಲ್ಲ, ಸಮರ್ಥ ನಾಯಕತ್ವ, ಎಲ್ಲ ಸ್ತರಗಳಲ್ಲಿ ಅಭಿಪ್ರೇರಣೆ, ವೈಯಕ್ತಿಕ ಮತ್ತು ಸಮೂಹ ಮಟ್ಟದಲ್ಲಿ ಸೇನಾಪಡೆಗೆ ದೊರೆತ ತರಬೇತಿಯ ಸಮರ್ಪಕತೆ, ಸಮಸ್ತ ಯುದ್ಧಸಾಮಗ್ರಿಗಳ ದಕ್ಷತೆ, ಸಂಪರ್ಕ ಮತ್ತು ಬೇಹುಸುದ್ದಿಯ ದಕ್ಷತೆ, ಸೇನಾಬಲಗಳ ಧೃತಿ (ಮೊರಾಲ್) ಮತ್ತು ಸೈನ್ಯ ವ್ಯವಸ್ಥಾಪನೆಯ ಯುಕ್ತತೆಗಳ ಸಮರ್ಪಕ ಮೇಳೈಸುವಿಕೆಯನ್ನೂ ಅವಲಂಬಿಸಿರುತ್ತದೆ. ಸಾಂಪ್ರದಾಯಿಕ ಸಮರದಲ್ಲಿ ಒಟ್ಟಾರೆ ಸಮರತಂತ್ರದ ಭಾಗವಾಗಿ ಯುದ್ಧತತ್ತ್ವಾನುಸಾರ ಮುನ್ನಡೆ, ಆಕ್ರಮಣ, ರಕ್ಷಣೆ ಮತ್ತು ಹಿನ್ನಡೆ (ಸರಳವಾಗಿ ಮುನ್ನಡೆ, ಹೊಡೆ, ತಡೆ, ಹಿನ್ನಡೆ) ಈ ನಾಲ್ಕು ಪರಿಕರ್ಮಗಳ ಪೈಕಿ ಯಾವುದಾದ ರೊಂದರಲ್ಲಿ ಬೃಹತ್ ರಣಾಂಗಣದ ವಿಭಿನ್ನ ಭಾಗಗಳಲ್ಲಿ ಅಥವಾ ವಿಭಿನ್ನ ರಣಾಂಗಣಗಳಲ್ಲಿ ಸೇನಾಪಡೆಗಳು ನಿರತವಾಗಿರುತ್ತವೆ. ಸೇನಾಪಡೆಗಳ ಚಲನೆ ಮತ್ತು ಹಂಚಿಕೆ, ಸಂಪರ್ಕ ಮತ್ತು ಬೇಹುಸುದ್ದಿ ಹಾಗೂ ಸೈನ್ಯ ವ್ಯವಸ್ಥಾಪನೆ ಇವಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಪರಿಕರ್ಮಕ್ಕೂ ವಿಶಿಷ್ಟವಾದ ವಿಭಿನ್ನ ಯುಕ್ತಿಗಳಿರುತ್ತವೆ. ಆಧುನಿಕ ಕಾಲದ ಭೂಯುದ್ಧ ಫಲಿತಾಂಶ ಮತ್ತು ಸಮರ ನಿರ್ವಹಣೆಯನ್ನು ಸಾಗರ ಹಾಗೂ ವಾಯು ಸಮರ ಸಾಮಥ್ರ್ಯ ಬಲವಾಗಿ ಪ್ರಭಾವಿಸುತ್ತದೆ.

	ಆಧುನಿಕ ಸಮರಾಚರಣೆ ಅತಿ ವಿನಾಶಕಾರಿ. ಕೆಲವೊಮ್ಮೆ, ವಾಸ್ತವಿಕ ಹೋರಾಟಕ್ಕೆ ಬದಲಾಗಿ ವ್ಯೂಹಯುಕ್ತಿಯ ಸೇನಾ ಸಂಚಲನೆ, ಪ್ರಚಾರ ಮತ್ತು ಮನೋವೈಜ್ಞಾನಿಕ ಸಮರ ಮುಖೇನ ರಾಷ್ಟ್ರೀಯ ಗುರಿಸಾಧನೆಯನ್ನು ಸಮರತಂತ್ರ ಅಪೇಕ್ಷಿಸಲೂಬಹುದು. ಜಗತ್ತಿನಾದ್ಯಂತ ಸಹಸ್ರಗಟ್ಟಳೆ ಸಂಖ್ಯೆಯಲ್ಲಿ ಬೈಜಿಕ ಸಮರಾಸ್ತ್ರಗಳ ಉತ್ಪಾದನೆ ಹಾಗೂ ಶೇಖರಣೆಯ ಹಿನ್ನೆಲೆಯಲ್ಲಿ, ಬೃಹತ್ಪ್ರಮಾಣದ ಬೈಜಿಕಾಸ್ತ್ರ ವಿನಿಮಯ ಬಹುತೇಕ ಜೀವರಾಶಿಸಹಿತ ಮನುಕುಲವನ್ನು ನಾಶಮಾಡಬಲ್ಲ ಬೈಜಿಕ ಚಳಿಗಾಲ (ನ್ಯೂಕ್ಲಿಯರ್ ವಿಂಟರ್) ಉಂಟುಮಾಡಬಹುದು ಎಂಬ ಅರಿವು ಬೈಜಿಕ ಸಮರಸಾಮಥ್ರ್ಯವುಳ್ಳ ಎಲ್ಲ ರಾಷ್ಟ್ರಗಳಿಗಿದೆ. ಸಮೂಹವಿನಾಶಕ ಶಸ್ತ್ರಗಳನ್ನು ಪ್ರಯೋಗಿಸುವುದಾಗಿ ವಿಶ್ವಸನೀಯ ಬೆದರಿಕೆ ಹಾಕುವ ಹಾಗೂ ಕಡಿಮೆ ತೀವ್ರತೆಯ ಸಂಘರ್ಷಗಳ ಮೂಲಕ ಯುದ್ಧ ಘೋಷಣೆಯನ್ನೂ ಮತ್ತದರ ಸಂಭವನೀಯ ವಿಸ್ತರಣೆಯನ್ನೂ ತಪ್ಪಿಸುವ ಪರಿಕಲ್ಪನೆಗಳು ರೂಪುಗೊಳ್ಳಲು ಈ ಅರಿವೇ ಕಾರಣ. 

	ಯುದ್ಧ ಮತ್ತು ರಾಷ್ಟ್ರ: ಆರ್ಥಿಕ ಕಾರಣಗಳಿಗಾಗಿ ಅಥವಾ ಗುಂಪಿನ ನಾಯಕನ ವೈಯಕ್ತಿಕ ಕಾರಣಗಳಿಗಾಗಿ ಬೇಟೆಗಾರ-ಸಂಗ್ರಾಹಕ ಹಂತದಲ್ಲಿದ್ದ ಇತಿಹಾಸಪೂರ್ವ ಸಾಮಾಜಿಕ ಗುಂಪುಗಳ ನಡುವೆ ಸಶಸ್ತ್ರ ಸಂಘರ್ಷ ಆಗುತ್ತಿತ್ತು. ಸಮುದಾಯಗಳು ಸಂಕೀರ್ಣವೂ ಕೃಷಿಆಧಾರಿತವೂ ಆದ ಬಳಿಕ ಊಳಿಗಮಾನ್ಯ ದೊರೆಗಳ ಹಿಡುವಳಿದಾರರ ಪೈಕಿ ನಿಯುಕ್ತರಾದವರ ಅಥವಾ ವೃತ್ತಿಸೈನಿಕರ ಸೇನಾಪಡೆಗಳು ಯುದ್ಧನಿರತವಾಗುತ್ತಿದ್ದುವು. ಮಾನವ ಆವಾಸದಿಂದ ದೂರಪ್ರದೇಶಗಳಲ್ಲಿ ಅಯೋಧ ನಾಗರಿಕರನ್ನು ನೇರವಾಗಿ ಭಾಗಿದಾರರಾಗಿಸದೆ ಆ ಕಾಲದ ಯುದ್ಧಗಳು ಜರಗುತ್ತಿದ್ದುವು. ಅಂದ ಮಾತ್ರಕ್ಕೆ, ಅಯೋಧ ನಾಗರಿಕರ ಮೇಲೆ ಯುದ್ಧಗಳು ಯಾವ ಪರಿಣಾಮವನ್ನೂ ಉಂಟುಮಾಡುತ್ತಿರಲಿಲ್ಲ ಎಂದರ್ಥವಲ್ಲ. ಯುದ್ಧಸಿದ್ಧತೆಯ ಅವಧಿಯಲ್ಲಿ, ಯುದ್ಧವಾಗುತ್ತಿರುವಾಗ ಮತ್ತು ಯುದ್ಧಾನಂತರ ಅವರು ತೆರಿಗೆ ತೆರುವುದರ ಮುಖೇನ ಹಣಕಾಸು ಪೂರೈಸಬೇಕಾಗುತ್ತಿತ್ತು. ಅಷ್ಟೇ ಅಲ್ಲ, ಸೈನಿಕರಿಗೆ ವಸತಿ ಹಾಗೂ ಭೋಜನ ಸೌಲಭ್ಯವನ್ನೂ ಒದಗಿಸಬೇಕಾಗಿತ್ತು. ಯುದ್ಧಾವಧಿಯಲ್ಲಿ ಸೇನೆಗಳು ಅಯೋಧ ಸಮುದಾಯದ ಮೇಲೆ ಆಕ್ರಮಣ ಮಾಡುತ್ತಿರಲಿಲ್ಲ ವಾದರೂ ಯುದ್ಧಾನಂತರ ಜಯಶೀಲ ಸೈನ್ಯ ಕೊಳ್ಳೆಹೊಡೆಯುತ್ತಿದು ದುಂಟು. ಯುದ್ಧಗಳು ಮೂಲತಃ ಆಗುತ್ತಿದ್ದುದು ಎರಡು ಸೈನ್ಯಗಳ ನಡುವೆ. ಆದ್ದರಿಂದ ಶತ್ರುಸೈನ್ಯವನ್ನು ಸೋಲಿಸುವುದು ಪ್ರಧಾನ ಸಮರೋದ್ದೇಶವಾಗಿತ್ತು. 

	ಎರಡನೆಯ ಮಹಾಯುದ್ಧಾವಧಿಯಲ್ಲಿ ಸಮರಾಚರಣೆಗೆ ನೆರವು ನೀಡುತ್ತಿದ್ದ ಉದ್ಯಮಗಳು ಶತ್ರುದಾಳಿಯ ಲಕ್ಷ್ಯಗಳಾದಾಗ ಉದ್ಯಮ ಮತ್ತು ಯುದ್ಧ ಇವುಗಳ ನಡುವಿನ ನಿಕಟಸಂಬಂಧ ಸುಸ್ಪಷ್ಟವಾಯಿತು. ಪರಿಕರ್ಮಗಳು ಶತ್ರುಸೈನ್ಯಮುಖಿಯಷ್ಟೇ ಅಲ್ಲದೆ ಶತ್ರುವಿನ ವ್ಯವಸ್ಥಾಪನೆ ಯತ್ತಲೂ ನಿರ್ದೇಶಿತವಾಗಿರುತ್ತಿದ್ದುವು. ಯುದ್ಧನಿರತ ರಾಷ್ಟ್ರದ ಮನೋಬಲ ಅಥವಾ ಧೃತಿ ಕುಗ್ಗಿಸಲು ಒಂದು ಉಪಾಯ ಅಲ್ಲಿಯ ನಾಗರಿಕರ (ಅಯೋಧ ಪ್ರಜೆಗಳ) ಮೇಲೆ ಆಕ್ರಮಣ ಎಂದು ವೈರಿ ಭಾವಿಸುವುದುಂಟು. ಯುದ್ಧನೀತಿಗೆ ಇದು ವಿರುದ್ಧವಾದರೂ ಯಶಸ್ಸೊಂದೇ ಯಶಸ್ಸಿನ ನಿಜಮಾನಕವೆಂಬ ಧೋರಣೆ ತಳೆವ ಬಲಿಷ್ಠ ರಾಷ್ಟ್ರಗಳು ಈ ನೀತಿಯನ್ನು ಉಲ್ಲಂಘಿಸಿದುದೇ ನಿಯಮ. ಉದಾಹರಣೆಗಳು: ಆಗಸ್ಟ್ 1945ರಲ್ಲಿ ಜಪಾನಿನ ಎರಡು ನಗರಗಳ ಮೇಲೆ ಅಮೆರಿಕದಿಂದ ಮೊದಲಬಾರಿಗೆ ಬೈಜಿಕಾಸ್ತ್ರಗಳ ತಾಡನೆ; ತದನಂತರ ದಶಕಗಳ ಕಾಲ ವಿಯೆಟ್ನಾಮ್‍ನಲ್ಲಿ ಜರಗಿದ ಸಮರಾಚರಣೆಯಲ್ಲಿ ನಾಗರಿಕ ಲಕ್ಷ್ಯಗಳ ಮೇಲೆ ಅಮೆರಿಕದಿಂದ ಸಾಂಪ್ರದಾಯಿಕ, ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳ ಪ್ರಯೋಗ; ಸು. 1979-87ರ ಅವಧಿಯಲ್ಲಿ ಆಫ್ಘಾನಿಸ್ತಾನದಲ್ಲಿ ರಷ್ಯ ಹೂಡಿದ ಸಮರತಂತ್ರಗಳು ಮತ್ತು ಆಫ್ಘಾನಿಸ್ತಾನ (2002) ಹಾಗೂ ಇರಾಕ್‍ಗಳಲ್ಲಿ (2003) ಅಮೆರಿಕ ನಡೆಸಿದ ಯುದ್ಧಾಚರಣೆಗಳು. ಈ ಉದಾಹರಣೆಗಳಲ್ಲಿ ಉಲ್ಲೇಖಿಸಿದ ಸನ್ನಿವೇಶಗಳಲ್ಲಿಯೂ ಸಂಬಂಧಿತ ಸಮರನೀತಿರೂಪಣಕಾರರು ನಿರೀಕ್ಷಿಸಿರದ ವಿಭಿನ್ನ ಫಲಿತಾಂಶಗಳು ದೊರೆತುವು ಎಂಬುದು ಗಮನಾರ್ಹ ಅಂಶ.

	ಆರ್ಥಿಕ ಸ್ಪರ್ಧೆ ಮತ್ತು ಸಮರ ಸಿದ್ಧತೆ ಹೆಚ್ಚುತ್ತಿರುವ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲ ರಾಷ್ಟ್ರಗಳೂ ತಮ್ಮ ನೆರೆರಾಷ್ಟ್ರಗಳ ಹಾಗೂ ಸಂಭವನೀಯ ಶತ್ರುರಾಷ್ಟ್ರಗಳ ರಾಜಕೀಯ ಮತ್ತು ಸೇನಾವ್ಯವಸ್ಥೆಗಳಿಗೆ ಸಂಬಂಧಿಸಿದ ಬೇಹುಸುದ್ದಿಯನ್ನು ಸಮಕಾಲೀನವಾಗಿಸಿಕೊಳ್ಳುತ್ತಲೇ ಇರುತ್ತವೆ. ಆದರೂ ರಾಜಕೀಯ ಹಗೆತನ ಉಂಟಾದಾಗ ಮತ್ತು ಸಶಸ್ತ್ರ ಸಂಘರ್ಷದ ಆರಂಭಕ್ಕೆ ಮುನ್ನ ಶತ್ರುವಿನ ಸೈನ್ಯಾಧಿಪತ್ಯ ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ನಿಷ್ಪರಿಣಾಮಕಾರಿಗೊಳಿಸುವ ಸಲುವಾಗಿ ಎದುರಾಳಿಯ ಸೇನಾಬಲ ಮತ್ತು ಹಂಚಿಕೆ, ಸಂಪರ್ಕ ಮತ್ತು ಸೈನ್ಯ ವ್ಯವಸ್ಥಾಪನೆಯ ಬಗ್ಗೆ ಗರಿಷ್ಠ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತವೆ. ಅಷ್ಟೇ ಅಲ್ಲದೆ, ಬೇಹುಗಾರಿಕೆ ಮತ್ತು ಪ್ರತಿಬೇಹುಗಾರಿಕೆ ಚಟುವಟಿಕೆಗಳ ನೆರವಿನಿಂದ ತಮ್ಮ ಬಗ್ಗೆ ಯಾವ ಮಾಹಿತಿಯೂ ಶತ್ರುವಿಗೆ ಲಭಿಸದಂತೆ ಮಾಡಲು ಹೆಣಗಾಡುತ್ತವೆ. ಸಮರತಂತ್ರರೂಪಣೆಗೆ ಬೇಕಾದ ಬೇಹುಸುದ್ದಿ ರಾಷ್ಟ್ರಗಳಿಗೆ ದೂತಾವಾಸಗಳ ಮತ್ತು ಗುಪ್ತಚಾರರ ಮೂಲಕ ಲಭ್ಯ. ಕ್ಷೇತ್ರಮಟ್ಟದಲ್ಲಾದರೋ ಇದು ಲಭ್ಯವಾಗುವುದು ಕಾವಲುದಳದ ಗಸ್ತುತಿರುಗಾಟದಿಂದ. ಈ ಎಲ್ಲ ಚಟುವಟಿಕೆಗಳಿಗೆ ಸಿ4ಐಎಸ್‍ಆರ್ ಎಂದು ಹೆಸರಿಡಲಾಗಿರುವ ಅತಿವಿಕಸಿತ ಸಂಕೀರ್ಣ ತಂತ್ರವಿದ್ಯೆಯ ಉಪಯೋಗ ಅನಿವಾರ್ಯ. ಸಿ4ಐಎಸ್‍ಆರ್‍ನ ವಿಸ್ತರಣೆ ಇಂತಿದೆ: ಸಂಪರ್ಕ (ಕಮ್ಯೂನಿಕೇಶನ್), ಆಧಿಪತ್ಯ (ಕಮಾಂಡ್), ನಿಯಂತ್ರಣ (ಕಂಟ್ರೋಲ್), ಗಣಕ (ಕಂಪ್ಯೂಟರ್), ಬೇಹುಸುದ್ದಿ (ಇಂಟೆಲಿಜೆನ್ಸ್), ಕಣ್ಗಾವಲು (ಸರ್‍ವೇಲನ್ಸ್) ಮತ್ತು ಸ್ಥಳಶೋಧನೆ (ರಿಕಾನಸೆನ್ಸ್). ಸಶಸ್ತ್ರ ಸಂಘರ್ಷಾವಧಿಯಲ್ಲಿ ಯುದ್ಧಾಚರಣೆಯ ಫಲಿತಾಂಶದ ಮೇಲೆ ಸಿ4ಐಎಸ್‍ಆರ್ ನಿರ್ಣಾಯಕ ಪ್ರಭಾವ ಬೀರುತ್ತದೆ.

	ಅಸಾಂಪ್ರದಾಯಿಕ ಎನ್ನಬಹುದಾದ ಅನೇಕ ಉಚ್ಚಕ್ಷಮತೆಯ ಬೈಜಿಕ, ಜೈವಿಕ ಮತ್ತು ರಾಸಾಯನಿಕ (ಎನ್‍ಬಿಸಿ: ನ್ಯೂಕ್ಲಿಯರ್, ಬಯಲಾಜಿಕಲ್, ಕೆಮಿಕಲ್) ಆಯುಧಗಳು ಈಗ ಲಭ್ಯ. ಇವೇ ಸಮೂಹವಿನಾಶಕ ಶಸ್ತ್ರಗಳು (ಡಬ್ಲ್ಯುಎಮ್‍ಡಿ: ವೆಪನ್ಸ್ ಆಫ್ ಮಾಸ್ ಡಿಸ್ಟ್ರಕ್ಷನ್). ಈ ಶಸ್ತ್ರಗಳನ್ನು ವಿಕಸಿಸಿದ ತಂತ್ರವಿದ್ಯೆಗಳು ಹೊಸಬಗೆಯ ಯುದ್ಧಾಚರಣೆಗ ಳನ್ನು ಹುಟ್ಟುಹಾಕಿವೆ. ಆಕ್ರಮಣಶೀಲ ಅಥವಾ ರಕ್ಷಣಾತ್ಮಕ ü ಎನ್‍ಬಿಸಿ ಯುದ್ಧಾಚರಣೆಗೆ ಸಂಬಂಧಿಸಿದಂತೆ ಜಗತ್ತಿನ ಎಲ್ಲ ಪ್ರಮುಖ ಸೇನಾವ್ಯವಸ್ಥೆ ಗಳೂ ಯುಕ್ತ ಸಿದ್ಧಾಂತಗಳನ್ನು ರೂಪಿಸಿಕೊಂಡಿವೆ. ಸುವಿಕಸಿತ ವೈಜ್ಞಾನಿಕ ಮತ್ತು ತಂತ್ರವಿದ್ಯಾ ಬುನಾದಿಯುಳ್ಳ ರಾಷ್ಟ್ರಗಳು ಮಾತ್ರ ಎನ್‍ಬಿಸಿ ಆಯುಧಗಳನ್ನು ಸ್ವತಂತ್ರವಾಗಿ ತಯಾರಿಸಬಲ್ಲವು, ಸುರಕ್ಷಿತವಾಗಿ ಶೇಖರಿಸಿಡಬಲ್ಲವು ಮತ್ತು ನಿಗದಿತ ಲಕ್ಷ್ಯಗಳತ್ತ ನಿಖರವಾಗಿ ಪ್ರಯೋಗಿಸಬಲ್ಲವು.

	ತನ್ನ ರಾಜಕೀಯ ಗುರಿಸಾಧನೆಗಾಗಿ ಆಥವಾ ಇತರರ ಆಕ್ರಮಣಕ್ಕೆ ಈಡಾದ ರಾಷ್ಟ್ರ ಯುದ್ಧ ಘೋಷಿಸಿದರೆ ಅದು ಯಾವ ದಿಶೆಯಲ್ಲಿ ಅಥವಾ ರೀತಿಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಆ ರಾಷ್ಟ್ರದ ರಾಜಕೀಯ ಮುಖಂಡತ್ವ, ನೀತಿ ಮತ್ತು ತಂತ್ರಗಳು ನಿರ್ಧರಿಸುತ್ತವೆ. ರಾಷ್ಟ್ರದ ಸೇನಾನಾಯಕರು ಯುದ್ಧದಲ್ಲಿ ಜಯಶೀಲರಾಗಬೇಕಾದರೆ ಸುಸ್ಪಷ್ಟ ನಿರೂಪಿತ ನೀತಿ ಮತ್ತು ತಂತ್ರವಿರಬೇಕಾದದ್ದು ಅತ್ಯವಶ್ಯ. ಅಷ್ಟೇ ಅಲ್ಲ, ರಾಷ್ಟ್ರಹಿತಕ್ಕಾಗಿ ಯುದ್ಧಾವಧಿಯಲ್ಲಿ ರಾಜಕೀಯ ಮತ್ತು ಸೇನಾನಾಯಕರ ನಡುವೆ ನಿರಂತರ ಸಹಕಾರ ಹಾಗೂ ಪರಸ್ಪರ ವಿಶ್ವಾಸ ಇರಬೇಕಾದ್ದೂ ಅನಿವಾರ್ಯ.

	ತಂತ್ರವಿದ್ಯೆ ಎಷ್ಟೇ ಉತ್ಕøಷ್ಟವಾಗಿದ್ದರೂ ವಾಸ್ತವಿಕ ಯುದ್ಧಾಚರಣೆ ಕ್ಲಿಷ್ಟವೂ ರಕ್ತಪಾತಯುಕ್ತವೂ ಆಗಿರುವುದು. ಸೀಮಿತ ಅಥವಾ ಕಡಿಮೆ ತೀವ್ರತೆಯ ಸಶಸ್ತ್ರ ಸಂಘರ್ಷಗಳನ್ನೂ ಒಳಗೊಂಡು ಎಲ್ಲ ಯುದ್ಧಗಳು ಸಮರೋದ್ಯಮ ಸಂಕೀರ್ಣದ ವಾಣಿಜ್ಯಿಕ ಯಶಸ್ಸನ್ನು ಪುಷ್ಟೀಕರಿಸಿದರೂ ಸಾಮಾಜಿಕ, ಆರ್ಥಿಕ, ಪರಿಸರ ವ್ಯವಸ್ಥೆಯ ಮೇಲೆ ವ್ಯಾಪಕ ಮತ್ತು ತೀವ್ರ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಿಯೇಮಾಡುತ್ತವೆ. 

	ಸಂಘರ್ಷದ ಸಂಸ್ಥೀಕರಣ: ಸಾಮಾನ್ಯವಾಗಿ ವಾಸ್ತವಿಕ ಹೋರಾಟವಲಯದಿಂದಾಚೆ ಯುದ್ಧ ಸಾಮಗ್ರಿಗಳ ಪೂರೈಕೆ, ನಿರ್ವಹಣೆ ಮತ್ತು ಸಾಗಾಣಿಕೆಗಾಗಿ ಅಯೋಧ ನಾಗರಿಕ ಗುತ್ತಿಗೆದಾರರನ್ನು ಸೇನಾಪಡೆ ನೇಮಿಸುತ್ತದೆ. ಶಸ್ತ್ರಸಜ್ಜಿತ ನಾಗರಿಕರನ್ನು (ಸಾಮಾನ್ಯವಾಗಿ ಮಾಜಿ ಸೈನಿಕರನ್ನು) ಹೋರಾಟವಲಯದೊಳಗೆ ಹೋರಾಡಲು ಮತ್ತು ಯುದ್ಧಸಂಬಂಧಿತ (ಉದಾ: ಸಂಪರ್ಕ ಮತ್ತು ಬೇಹುಸುದ್ದಿ) ಹಾಗೂ ಸಂಬಂಧಿತವಲ್ಲದ ಕಾರ್ಯಗಳಿಗೆ ನಿಯೋಜಿಸುವುದು ಇತ್ತೀಚಿನ ಬೆಳೆವಣಿಗೆ. ಈ ಕಾರ್ಯಗಳ ನಿರ್ವಹಣೆಗೆ ಅಗತ್ಯವಾದ ತರಬೇತಿ ಪಡೆದು ಸಜ್ಜಾಗಿರುವ ಈ ನಾಗರಿಕರು ಸಾಮಾನ್ಯವಾಗಿ ಯಾವುದಾದರೂ ಖಾಸಗಿ ಸಂಸ್ಥೆಯ ನೌಕರರಾಗಿರುತ್ತಾರೆ. ಜಾಗತೀಕರಣ ಮತ್ತು ಸುಸಜ್ಜಿತ ಸೇನಾವ್ಯವಸ್ಥೆಯತ್ತ ರಾಷ್ಟ್ರಗಳು ಸಾಗುತ್ತಿರುವ ಇಂದಿನ ಸನ್ನಿವೇಶದಲ್ಲಿ ಖಾಸಗಿ ಸಂಸ್ಥೆಗಳು ಯುದ್ಧಪರಿಕರ್ಮ, ಸಂಪರ್ಕ ಹಾಗೂ ಬೇಹುಸುದ್ದಿ ಮತ್ತು ವ್ಯವಸ್ಥಾಪನಾಕ್ಷೇತ್ರ ಪ್ರವೇಶಿಸಿರುವುದು ಯುದ್ಧಮಾಡುತ್ತಿರುವ ರಾಷ್ಟ್ರಗಳು ಪರಿಕಲ್ಪನೆಯಲ್ಲಿ ಮಹತ್ತ್ವಪೂರ್ಣ ಬದಲಾವಣೆ ಆಗುತ್ತಿರುವುದರ ಸೂಚಕ. ತತ್ಪರಿಣಾಮವಾಗಿ,  ಸಂಸ್ಥಾಲಾಭಪ್ರೇರಿತ ಸಶಸ್ತ್ರ ಸಂಘರ್ಷ ಆಗುವುದೂ ಈಗ ಸಾಧ್ಯ. 

	ಅನೇಕ ಅತಿ ಉದ್ಯಮೀಕೃತ ರಾಷ್ಟ್ರಗಳಲ್ಲಿ ಸಮರೋದ್ಯಮ ಸಂಕೀರ್ಣ ವನ್ನು ಬಲು ಶಕ್ತಿಶಾಲಿ ಸಂಸ್ಥೆಗಳು ನಿರ್ಮಿಸಿವೆ. ಕಾರ್ಮಿಕರು, ಆಡಳಿತಗಾ ರರು, ಸಂಶೋಧಕರು ಮೊದಲಾದವರನ್ನು ಒಳಗೊಂಡ ಬೃಹತ್ಪ್ರಮಾಣದ ಸಿಬ್ಬಂದಿ ಈ ಸಂಸ್ಥೆಗಳಲ್ಲಿ ದುಡಿಯುತ್ತಿದ್ದಾರೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲೋಸುಗವಾದರೂ ಇವು ಉತ್ಪಾದಿಸುವ ಸಮರ ಸಾಮಗ್ರಿಗಳಿಗೆ ಸ್ಥಿರ ಮಾರುಕಟ್ಟೆಯ ಆವಶ್ಯಕತೆ ಇದೆ. ಸಮರೋದ್ಯಮ ಸಂಕೀರ್ಣಕ್ಕೂ ಇತರ ಉದ್ಯಮಗಳಿಗೂ ನಡುವೆ ಅನೇಕ ಸಂಕೀರ್ಣ ವಾಣಿಜ್ಯಿಕ, ತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳಿವೆ. ಆದ್ದರಿಂದ ಇವು ರಾಷ್ಟ್ರೀಯ ಗುರಿಗಳನ್ನೂ ತಂತ್ರವನ್ನೂ ನಿರ್ಧರಿಸುವವರ ಮೇಲೆ ಮತ್ತು ಸರ್ಕಾರಗಳ ಮೇಲೆ ಗಣನೀಯ ಪ್ರಭಾವ ಬೀರುತ್ತವೆ.

	ಗೆರಿಲ್ಲಾ ಯುದ್ಧಾಚರಣೆ ಮತ್ತು ಬಂಡಾಯ: ಸಶಸ್ತ್ರ ಸಂಘರ್ಷಗಳು ಯಾವಾಗಲೂ ರಾಷ್ಟ್ರಗಳ ನಡುವೆಯೇ ಆಗಬೇಕೆಂದೇನಿಲ್ಲ. ರಾಷ್ಟ್ರದ ಒಳಗಿರುವ ಗೆರಿಲ್ಲಾಗಳು ಅಥವಾ ಬಂಡಾಯಗಾರರ ಮತ್ತು ರಾಷ್ಟ್ರರಕ್ಷಣಾದಳಗಳ ನಡುವೆಯೂ ಸೀಮಿತ ಅಥವಾ ಕಡಿಮೆ ತೀವ್ರತೆಯ ಸಂಘರ್ಷಗಳು ಘಟಿಸಬಹುದು. ಇಂಥ ಸಂಘರ್ಷಗಳೇ ಗೆರಿಲ್ಲಾ ಯುದ್ಧಾಚರಣೆ. ಧಾಳಿ ಮಾಡಿದ ಪರಕೀಯರು ಅಥವಾ ಅಸ್ತಿತ್ವದಲ್ಲಿರುವ ಸರ್ಕಾರ ಎಸಗಿತು ಎನ್ನಲಾದ ಕಲ್ಪಿತ ಅಥವಾ ವಾಸ್ತವಿಕ ಅಕ್ರಮಗಳಿಗೆ ಕದನಾಸಕ್ತ ಗುಂಪುಗಳ ಸಾಮಾನ್ಯ ಪ್ರತಿಕ್ರಿಯೆ ಇದು. ಈ ಗುಂಪುಗಳು ಸೇನೆ ಹಾಗೂ ಆರಕ್ಷಕ ದಳಗಳ ಮೇಲೆ ದಾಳಿ ಮಾಡುವುದರ ಜೊತೆಗೆ ಯುಕ್ತ ಪ್ರಚಾರ ಮುಖೇನ ತಮ್ಮ ಸೈದ್ಧಾಂತಿಕ ನಿಲವನ್ನು ತಿಳಿಸಿ ಅಥವಾ ಬೆದರಿಸಿ ಅಥವಾ ಆಮಿಷಗಳನ್ನೊಡ್ಡಿ ಸಾಮಾನ್ಯ ಜನತೆಯನ್ನು ಒಲಿಸಿಕೊಳ್ಳಲೂ ಪ್ರಯತ್ನಿಸುತ್ತವೆ. ಗೆರಿಲ್ಲಾಗಳ ಮತ್ತು ರಕ್ಷಣಾದಳಗಳ ನಡುವಿನ ಸಂಘರ್ಷದಲ್ಲಿ ಅನೈಚ್ಛಿಕವಾಗಿ ಸಿಕ್ಕಿಹಾಕಿಕೊಳ್ಳುವುದು, ಸಾವುನೋವುಗಳಿಗೆ ಈಡಾಗುವುದು ಜನಸಾಮಾನ್ಯರು.

	ಗೆರಿಲ್ಲಾ ಮತ್ತು ಬಂಡಾಯಗಾರರ ವಿರುದ್ಧ ಕಾರ್ಯಾಚರಣೆಗೆ ಪ್ರಸಾಮಾನ್ಯ ಯುದ್ಧಾಚರಣೆಯಿಂದ ವಿಭಿನ್ನ ತಂತ್ರಗಳನ್ನು ವ್ಯವಸ್ಥಾಬದ್ಧ ಸೇನೆಗಳು ರೂಪಿಸಿವೆ. ಈ ಕಾರ್ಯಾಚರಣೆಯಲ್ಲಿ ಸ್ಥಳಿಕವಾದ ಕಾರ್ಯೋಪಯುಕ್ತ ಮಾಹಿತಿ ಪಡೆಯಲೋಸುಗ ಸಂಪರ್ಕ ಮತ್ತು ಉಪಯೋಗಿಸುವ ಯುಕ್ತಿಗಳಲ್ಲಿ ಯುಕ್ತ ಬದಲಾವಣೆ ಮಾಡಲಾಗುತ್ತದೆ. ಸಮಾಜದ ಅತ್ಯಂತ ಕೆಳಸ್ತರದ ವರೆಗಿನ ರಾಜಕೀಯ, ಕಾನೂನು ಹಾಗೂ ಮಾನವಹಕ್ಕು ಶಿಕ್ಷಣದ ಸ್ಥಿತಿಯ ಅರಿವೂ ಸೇನಾಪಡೆ ಗಳಿಗಿರಬೇಕು. ಆದ್ದರಿಂದ ಸೇನಾಪಡೆಗಳು ಇಂಥ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಿದ್ಧಾಂತಗಳನ್ನು ರೂಪಿಸಿಕೊಂಡಿವೆ. ಜೊತೆಗೆ, ಈ ತೆರನಾದ ಕಾರ್ಯಾಚರಣೆಗಳಿಗೆ ಅಗತ್ಯವಾದ ವಿಶೇಷ ಅಧಿಕಾರಗಳನ್ನು ರಕ್ಷಣಾದಳಗಳಿಗೆ ನೀಡಲೋಸುಗ ಶಾಸನಗಳನ್ನು ಸರ್ಕಾರಗಳು ಜಾರಿಮಾಡಿವೆ. ಗೆರಿಲ್ಲಾ ಪಡೆಗಳು ಕೈಯಲ್ಲಿ ಹಿಡಿಯುವ ಆಯಧಗಳಿಗಿಂತ ಹೆಚ್ಚಿನದನ್ನು ಉಪಯೋಗಿಸುವುದು ಮತ್ತು ನೇರವಾಗಿ ಪೌರುಷದಿಂದ ಹೋರಾಡುವುದು ವಿರಳವಾದರೂ ಅವು ಬಳಸುವ ಹೊಡೆ-ಓಡು ಯುಕ್ತಿ ಮತ್ತು ರಕ್ಷಣದಳ ಅಥವಾ ನಾಗರಿಕ ಲಕ್ಷ್ಯಗಳ ಮೇಲೆ ಅನಿರೀಕ್ಷಿತ ಸ್ಥಳ ಹಾಗೂ ವೇಳೆಯಲ್ಲಿ ಅವು ಮಾಡುವ ಆಕ್ರಮಣಗಳು ದೀರ್ಘಾವಧಿಯಲ್ಲಿ ಅಪಾರಹಾನಿ ಉಂಟುಮಾಡುತ್ತವೆ. ರಕ್ಷಣಾಪಡೆಗಳ ಮತ್ತು ನಾಗರಿಕರ ವಿರುದ್ಧ ಗೆರಿಲ್ಲಾಗಳು ರೇಡಿಯೊ-ನಿಯಂತ್ರಿತ ಆಶು (ಇಂಪ್ರೊವೈಸ್ಡ್) ಆಸ್ಫೋಟ ಸಾಧನಗಳು, ನೆಲಬಾಂಬುಗಳು ಮತ್ತು ಬೂಬಿಟ್ರ್ಯಾಪ್‍ಗಳನ್ನು (ಸಾಮಾನ್ಯವಾಗಿ ಸ್ಪರ್ಶಿಸಿದೊಡನೆ ಆಸ್ಫೋಟಿಸುವ, ಅನಪಾಯಕಾರಿ ಪದಾರ್ಥದಂತೆ ಕಾಣುವ ಆಸ್ಫೋಟಕಗಳು) ಬಳಸುತ್ತಾರೆ. ವಿಶೇಷತಃ ಸಂಘರ್ಷದ ಆರಂಭಿಕ ಹಂತಗಳಲ್ಲಿ ತಾವೇ ತಯಾರಿಸಿದ ಆಯುಧಗಳನ್ನು ಮತ್ತು ಆಶುಸಲಕರಣೆ ಅಥವಾ ಹೂಟಗಳನ್ನು ಗೆರಿಲ್ಲಾಗಳು ಬಳಸುತ್ತಾರೆ. ಉದಾ: ಅಡಗಿರುವ ಸೇನಾಪಡೆ ತನ್ನನ್ನು ರಕ್ಷಿಸಿಕೊಳ್ಳಲು ಅರಿವಿಲ್ಲದೆ ಬಿದಿರಿನ ವಿಷಲೇಪಿತ ದಸಿಗಳ ಮೇಲಕ್ಕೆ ಹಾರುವಂತೆ ಮಾಡುವುದು. ಇಂಥ ತಂತ್ರಗಳಿಂದಾಗಿ ಬಲು ಶಕ್ತಿಶಾಲೀ ವ್ಯವಸ್ಥಾಬದ್ಧ ಸೇನಾಪಡೆಗಳೂ ತ್ರಾಣಗುಂದಿ ರಣರಂಗದಿಂದ ಹಿಂದೆ ಸರಿದದ್ದುಂಟು. ಉದಾ: ವಿಯೆಟ್ನಾಮ್ ಯುದ್ಧದಲ್ಲಿ ಅಮೆರಿಕ ಸೇನಾಪಡೆಗಳ ಅನುಭವ.

	ಯುದ್ಧಾಚರಣೆಯ ಹೊಸ ಆಯಾಮ ಭಯೋತ್ಪಾದನೆ: ಗೆರಿಲ್ಲಯುಕ್ತಿ ಹಾಗೂ ಭಯೋತ್ಪಾದನೆಯ ನಡುವಿನ ವ್ಯತ್ಯಾಸ ಆ ಪದಗಳ ಧ್ವನ್ಯರ್ಥವನ್ನು ಮೀರಿದ್ದಾಗಿದೆ. ದಾಳಿ ಮಾಡಿದ ಪರಕೀಯರ ಅಥವಾ ಅಸ್ತಿತ್ವದಲ್ಲಿರುವ ಸರ್ಕಾರದ ಸೇನಾಪಡೆಗಳ ಶಕ್ತಿಗುಂದಿಸುವುದು ಅಥವಾ ನಾಶಮಾಡುವುದು ಮಾತ್ರ ಗೆರಿಲಗಳ ಉದ್ದೇಶ. ಈ ಸಂದರ್ಭದಲ್ಲಿ ಆಗುವ ನಾಗರಿಕ ಪ್ರಾಣ ಅಥವಾ ಆಸ್ತಿಹಾನಿ ಸಂಘರ್ಷದ ಅನುದ್ದೇಶಿತ ಆನುಷಂಗಿಕ ಪರಿಣಾಮ. ಭಯೋತ್ಪಾದನೆಯಾದರೋ ಜನತೆಯಲ್ಲಿ ಅತಿ ಭೀತಿ ಮೂಡಿಸಲೋಸುಗವೇ ಉದ್ದೇಶಪೂರ್ವಕವಾಗಿ ಗರಿಷ್ಠ ಪ್ರಮಾಣದಲ್ಲಿ ನಾಗರಿಕರ ಪ್ರಾಣಹಾನಿ ಉಂಟುಮಾಡುತ್ತದೆ. ತನ್ನ ಸೈನ್ಯಸಂಪನ್ಮೂಲವನ್ನು ಆಂತರಿಕ ಭದ್ರತೆ ಕಾಯ್ದುಕೊಳ್ಳಲೋಸುಗ ವ್ಯಯಿಸುವಂತೆ ಅಥವಾ ತಮ್ಮೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಂತೆ ಸರ್ಕಾರವನ್ನು ಬಲಾತ್ಕರಿಸುವುದು ಭಯೋತ್ಪಾದಕರ ಗುರಿ.
	ತಮ್ಮ ದೇಹಕ್ಕೆ ಆಸ್ಫೋಟಕಗಳನ್ನು ಕಟ್ಟಿಕೊಂಡು ಅಥವಾ ಆಸ್ಫೋಟಕ ತುಂಬಿದ ವಾಹನ ಚಾಲಿಸಿ ನಿಗದಿತ ಲಕ್ಷ್ಯದ ಸಮೀಪ ಆಸ್ಫೋಟಿಸುವ ಆತ್ಮಹತ್ಯಾದಳದ ಸದಸ್ಯರು (ಹ್ಯೂಮನ್ ಬಾಂಬ್) ಭಯೋತ್ಪಾದನೆಗೆ ಹೊಸ ಆಯಾಮ ನೀಡಿದ್ದಾರೆ. ಇದು ಘಟಿಸದಂತೆ ಮಾಡಲು ವ್ಯಕ್ತಿಗಳ ಮತ್ತು ವಾಹನಗಳ ತಪಾಸಣೆ ಮಾಡುವುದರ ಮೂಲಕ ಬಿಗಿ ಭದ್ರತೆ ಒದಗಿಸುವುದರ ಹೊರತಾಗಿ ಸರ್ಕಾರ ಬೇರೇನನ್ನೂ ಮಾಡಲಾರದ ಸ್ಥಿತಿ ಇದೆ. ಲಭ್ಯ ಆಧುನಿಕ ತಂತ್ರವಿದ್ಯೆ ಬಳಸಿ ತಮ್ಮದೇ ಆದ ನವೀನಾಚರಣೆಯಿಂದ ಭಯೋತ್ಪಾದಕ ಕೃತ್ಯಗಳೆಸಗುವ ಗುಂಪುಗಳು ಜಗತ್ತಿನಾದ್ಯಂತ ಹೆಚ್ಚುತ್ತಿವೆ. ನಾಗರಿಕ ಸಾರಿಗೆ ವಿಮಾನಗಳನ್ನೇ ಆಸ್ಫೋಟಕಗಳಾಗಿ ಬಳಸಿ ಸುಸಂಘಟಿತವೂ ನಿಖರವೂ ಆದ ಪರಿಕರ್ಮ ದಿಂದ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ (ವಲ್ರ್ಡ್ ಟ್ರೇಡ್ ಸೆಂಟರ್) ಮತ್ತು ಪೆಂಟಗನ್ ಕಟ್ಟಡಗಳನ್ನು 2001 ಸೆಪ್ಟೆಂಬರ್ 11ರಂದು ನಾಶ ಮಾಡಿದ್ದು (9/11 ದಾಳಿ ಎಂದು ಈಗ ಇದು ಪ್ರಸಿದ್ಧ) ಯುಕ್ತ ಮಾಹಿತಿ ಪಡೆಯಲು ಮತ್ತು ಪ್ರಬಲ ಶತ್ರುವಿಗೆ ಸಾಧ್ಯವಿರುವಷ್ಟು ಹೆಚ್ಚು ಭೌತಿಕ, ಆರ್ಥಿಕ ಹಾನಿ ಹಗೂ ಧೃತಿಪತನ ಉಂಟುಮಾಡಲು ಆಧುನಿಕ ತಂತ್ರವಿದ್ಯೆಯನ್ನು ಭಯೋತ್ಪಾದಕರು ಬಳಸಿದ್ದರ ಉತ್ಕøಷ್ಟ ಉದಾಹರಣೆ.

	ಸಾಂಪ್ರದಾಯಿಕ ಆಸ್ಫೋಟಕಗಳೊಂದಿಗೆ ವಿಕಿರಣಪಟು ಸಾಮಗ್ರಿಗಳನ್ನು ಸಂಯೋಜಿಸಿ ತಯಾರಿಸಿದ ಸಾಧನಗಳೇ ಕೊಳಕು ಬಾಂಬುಗಳು (ಡರ್ಟಿ ಬಾಂಬ್ಸ್). ಇವು ಬೈಜಿಕ ಅಸ್ತ್ರಗಳಲ್ಲ. ಆದರೂ ವಿಶಾಲ ಭೌಗೋಳಿಕ ಪ್ರದೇಶವನ್ನು ವಿಕಿರಣಪಟು ಪದಾರ್ಥದಿಂದ ಕಲುಷಗೊಳಿ ಸುತ್ತವೆ. ಅಷ್ಟೇ ಅಲ್ಲದೆ, ಪಟ್ಟಣವಾಸಿಗಳನ್ನು ವಿಶೇಷವಾಗಿ ಭಯಭೀತರ ನ್ನಾಗಿಸುತ್ತವೆ. ವಿದಳನಶೀಲ ಬೈಜಿಕಪದಾರ್ಥಗಳನ್ನು ಬೃಹತ್ಪ್ರಮಾಣದಲ್ಲಿ ಪ್ರಪಂಚಾದ್ಯತ ಅನೇಕ ಉದ್ಯಮಗಳು ಉತ್ಪಾದಿಸುತ್ತಿವೆ. ಇವುಗಳ ಪೈಕಿ ಕೆಲವು ಲೆಕ್ಕಕ್ಕೆ ಸಿಗದೆ ಕಾಣೆಯಾಗುತ್ತಿವೆ. ಇಂಥ ಸನ್ನಿವೇಶದಲ್ಲಿ, ಭಯೋತ್ಪಾದನೆಗಾಗಿ ಕೊಳಕು ಬಾಂಬುಗಳ ತಯಾರಿ ಮತ್ತು ಬಳಕೆಯ ಸಾಧ್ಯತೆಯನ್ನು ನಿರ್ಲಕ್ಷಿಸುವಂತಿಲ್ಲ.

	ಭಯೋತ್ಪಾದನೆ ಸೇನಾಪಡೆಗಳು ಮತ್ತಿತರ ಸರ್ಕಾರಿ ಸಂಸ್ಥೆಗಳ ಮೇಲೆ ಹೆಚ್ಚುವರಿ ಹೊರೆ ಹೇರುತ್ತದೆ. ನಾಗರಿಕ ಪ್ರಾಣಹಾನಿ ಮತ್ತು ಸಾಮಾಜಿಕ ಉದ್ವೇಗ ಹೆಚ್ಚತೊಡಗಿದಾಗ ಆಂತರಿಕ ಭದ್ರತೆ ಕಾಯ್ದುಕೊಳ್ಳ ಲೊಸುಗ ಸೇನಾಪಡೆಗಳ ಬಳಕೆಯೂ ಹೆಚ್ಚುತ್ತದೆ. ತತ್ಪರಿಣಾಮವಾಗಿ ಆಂತರಿಕ ಭದ್ರತೆ ಬಾಬಿನ ವೆಚ್ಚ ಏರುತ್ತದೆ. ಹೀಗಾಗುವುದರಿಂದ ಉದ್ಭವಿಸುವ ರಾಜಕೀಯ ಪರಿಸ್ಥಿತಿಯ ದುರ್ಲಾಭ ಪಡೆಯುವುದೇ ಭಯೋತ್ಪಾದಕರ ಗುರಿ. ಜಗತ್ತಿನಾದ್ಯಂತ ಇರುವ ಸಮರೋದ್ಯಮಗಳ ಪೈಕಿ ಯಾವುದೋ ಕೆಲವು ಮಾತ್ರ ಗೆರಿಲ್ಲಾ ಮತ್ತು ಭಯೋತ್ಪಾದಕರಿಗೆ ಶಸ್ತ್ರಗಳ ಆಕರಗಳಾಗಿರುವುದು ವಿಪರ್ಯಾಸ. ಹಿಂಸೆಯನ್ನು ವಿರೋದಿ üಸಲು ಮತ್ತೊಂದು ಹಿಂಸೆ ಹುಟ್ಟಿದಾಗ ಅದರ ಪ್ರಮಾಣ ಮತ್ತು ಹರವು ಅಧಿಕಾಧಿಕವಾಗತೊಡಗುತ್ತದೆ. ಲಾಭವಾಗುವುದು ಸಮರೋದ್ಯಮ ಸಂಕೀರ್ಣಗಳಿಗೆ ಮತ್ತು ಸಂಬಂಧಿತ ಸಂಸ್ಥೆಗಳಿಗೆ ಮಾತ್ರ.

	ಯುದ್ಧ ಮತ್ತು ಪರಿಸರ: ಔದ್ಯಮಿಕ ಪ್ರಕ್ರಿಯೆಗಳಿಂದ ಪರಿಸರ ಮಾಲಿನ್ಯ ಹಬ್ಬತೊಡಗಿದ್ದೇ ಪರಿಸರವಿಜ್ಞಾನದ ಉಗಮಕ್ಕೆ ಮತ್ತು ಉದ್ಯಮಗಳಿಗೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಕಾನೂನುಗಳ ರೂಪಣೆಗೆ ಕಾರಣ. ಉದ್ಯಮಗಳು ಉಂಟುಮಾಡಬಹುದಾದ ಪರಿಸರಮಾಲಿನ್ಯಕ್ಕೆ ಗರಿಷ್ಠಮಿತಿ ವಿಧಿಸಬಲ್ಲ ತಂತ್ರವಿದ್ಯೆ ಈಗ ಲಭ್ಯ. 

	ರಾಷ್ಟ್ರಭದ್ರತೆಯ ಕಾರಣಗಳಿಗಾಗಿ ಈ ಕಾನೂನುಗಳು ಸಮರೋದ್ಯಮ ಸಂಕೀರ್ಣಗಳಿಗೆ ಅನ್ವಯಿಸುವುದಿಲ್ಲ. ಯುದ್ಧಸನ್ನದ್ಧತೆಯ ಉತ್ತಮೀಕರಣದ ಪ್ರಯತ್ನ ತೀವ್ರವಾದಂತೆಲ್ಲ ಪರಿಸರ ಮಾಲಿನ್ಯವೂ ಹೆಚ್ಚುತ್ತದೆ. ಯುದ್ಧಾ ರಂಭವಾದಾಗ ಯುದ್ಧಸಾಮಗ್ರಿಯ ಉತ್ಪಾದನೆ ಪ್ರಧಾನವಾಗುತ್ತದೆ; ಪರಿಸರಸಂರಕ್ಷಣೆ ಗೌಣವಾಗುತ್ತದೆ. ರಣಾಂಗಣದಲ್ಲಿ ಪರಿಸರಮಾಲಿನ್ಯದ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಉದಾಹರಣೆ: ಲೋಹಕವಚಗಳನ್ನು ಭೇದಿಸಲು ಬಳಸಿದ ಯರೇನಿಯಮ್‍ಯುಕ್ತ ಸಿಡಿಗುಂಡುಗಳನ್ನು ಉಪಯೋಗಿಸುವುದು ಸಾಮಾನ್ಯ. ಇದರಿಂದ ಆ ಪ್ರದೇಶದಲ್ಲಿ ಉಂಟಾಗುವ ದೀರ್ಘಕಾಲಿಕ ವಿಕಿರಣಪಟು ಮಾಲಿನ್ಯದ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಯುದ್ಧಾವಧಿಯಲ್ಲಾಗುವ ಪರಿಸರಮಾಲಿನ್ಯ ಅನಂತರದ ಶಾಂತಿ ಅವಧಿಯ ಮಾಲಿನ್ಯಕ್ಕೆ ಕಾರಣವಾಗುತ್ತದೆ.

	ಕೆಲವೊಮ್ಮೆ, ಯುದ್ಧನಿರತ ಸೇನಾಪಡೆಗಳನ್ನು ರಕ್ಷಿಸಲು ರೂಪಿಸಿದ ತಂತ್ರವನ್ನೇ ಯುದ್ಧಾನಂತರ ನಾಗರಿಕರಕ್ಷಣೆಗೆ ಬಳಸಬಹುದು. ಉದಾಹರಣೆ: ಎನ್‍ಬಿಸಿ ರಣಾಂಗಣದಲ್ಲಿ ಸೈನಿಕರು ಸುರಕ್ಷಿತವಾಗಿ ಹೋರಾಡಲು ರೂಪಿಸಿದ ತಂತ್ರವಿದ್ಯೆಯನ್ನು ಆ ಸ್ಥಳವನ್ನು ಶುದ್ಧೀಕರಿಸಿ ನಾಗರಿಕ ಬಳಕೆಗೆ ಯೋಗ್ಯವಾಗಿಸಲೂ (ಇದು ವಿಜಯೀ ರಾಷ್ಟ್ರದ ಆದ್ಯತೆಗಳ ಪೈಕಿ ಒಂದಾಗಿದ್ದರೆ ಮಾತ್ರ) ಬಳಸಬಹುದು.

	ಆಧುನಿಕ ತಂತ್ರವಿದ್ಯೆ ಮತ್ತು ಉದ್ಯಮಗಳ ಬುನಾದಿಯ ಮೇಲೆ ರೂಪುಗೊಂಡಿರುವ ಬಲು ಸಂಕೀರ್ಣ ಪ್ರಕ್ರಿಯೆ ಇಂದಿನ ಸಮರಾಚರಣೆ. ಎಂದೇ, ಸಮರವಿಜ್ಞಾನವೂ ಬಲು ಸಂಕೀರ್ಣ ವಿಜ್ಞಾನ. ನಿರಂತರ ಜಾಗರೂಕತೆಯೇ ಶಾಂತಿಗಾಗಿ ಜನತೆ ನೀಡಬೇಕಾದ ಶುಲ್ಕ. ಮನುಕುಲ ಒಮ್ಮೆ ಶಾಂತಿಸ್ಥಾಪನೆಯನ್ನು ತ್ರಿಕರಣಪೂರ್ವಕ ಅನುಸರಿಸಿದ್ದಾದರೆ ಆಗ ಯುದ್ಧ ಮತ್ತು ಅದರ ಹಾನಿ ಜನತೆಯನ್ನೆಂದೂ ಬಾಧಿಸವು. ಈ ದಿಶೆಯತ್ತ ಕೂಡ ಜನರಿಗೆ ಸದಾ ಶಿಕ್ಷಣವೀಯುತ್ತಿರಬೇಕು.	

	(ಎಸ್.ಜಿ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ